ನಾನಾ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಬಿಎ ಆಯುಕ್ತ ಮಹೇಶ್ವರ ರಾವ್
ನಾನಾ
Inspection


ಬೆಂಗಳೂರು, 26 ಮೇ (ಹಿ.ಸ.) :

ಆ್ಯಂಕರ್ : ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಜಿಬಿಎ ಆಯುಕ್ತ ಮಹೇಶ್ವರ ರಾವ್ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ಓಕಳೀಪುರಂ ಅಷ್ಟಪಥ ಕಾರಿಡಾರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಚೆನ್ನೈ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕಿ ಉಳಿದಿರುವ ಸಂಪರ್ಕ ರಸ್ತೆ ಕಾಮಗಾರಿಯನ್ನು ಮುಂದಿನ 25 ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಮೆಜೆಸ್ಟಿಕ್ನಿಂದ ರಾಜಾಜಿನಗರದತ್ತ ಸಾಗುವ ಮಾರ್ಗದ ಬಾಕ್ಸ್ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ರೈಲ್ವೆ ನಿಲ್ದಾಣದ ಕಡೆಗೆ ಸಂಪರ್ಕ ರಸ್ತೆ ನಿರ್ಮಾಣ, 1200 ಮಿ.ಮೀ. ವ್ಯಾಸದ ಮಳೆ ನೀರುಗಾಲುವೆ, 63 ಮೀಟರ್ ಉದ್ದದ ರಿಟೈನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು. ಹೊಸ ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಆರಂಭಿಸಿ ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಮಾದವನಗರ ರೈಲ್ವೆ ಕೆಳಸೇತುವೆ ಪ್ರದೇಶದಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಗ್ರೇಟಿಂಗ್ಗಳನ್ನು ಸದಾ ಸ್ವಚ್ಛವಾಗಿಡಬೇಕು ಎಂದು ಆಯುಕ್ತರು ಸೂಚಿಸಿದರು. ಚರಂಡಿಗಳ ಹೂಳೆತ್ತುವ ಕಾರ್ಯವನ್ನು ನಿಯಮಿತವಾಗಿ ಕೈಗೊಂಡು ಮಳೆಗಾಲದಲ್ಲಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದರು.

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಪಾದಚಾರಿ ಮಾರ್ಗಗಳ ಮೇಲಿರುವ ಮರದ ಅವಶೇಷಗಳು ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ರಸ್ತೆಗೆ ವಾಲಿರುವ ಮರದ ಕೊಂಬೆಗಳನ್ನು ಕತ್ತರಿಸಿ ವಾಹನ ಸಂಚಾರ ಸುಗಮಗೊಳಿಸುವಂತೆ ಸೂಚಿಸಿದರು.

ಕಾಮಗಾರಿಗಳ ನಂತರ ರಸ್ತೆ ಪುನಶ್ಚೇತನ ಕಾರ್ಯವನ್ನು ಗುಣಮಟ್ಟದೊಂದಿಗೆ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಿದರು.

ಡಾ. ರಾಜ್ಕುಮಾರ್ ರಸ್ತೆಯ ನವರಂಗ್ನಿಂದ ಸ್ಟಾರ್ ಬಜಾರ್ ಸಿಗ್ನಲ್ವರೆಗೆ ಸುಮಾರು 1.8 ಕಿಲೋಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಒಂದು ಬದಿಯ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಆಯುಕ್ತರು, ಉಳಿದ ಭಾಗದ ಕಾಮಗಾರಿಯನ್ನು ಕೈಗೆತ್ತಿಕೊಂಡು ಅಕ್ಟೋಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಲೇಶ್ವರಂ 8ನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ 800 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದ್ದು, ಸೈಡ್ ಡ್ರೇನ್ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ಚಿತ್ರಾಪುರ ಕ್ರಾಸ್ನಿಂದ 18ನೇ ಅಡ್ಡರಸ್ತೆಯವರೆಗೆ 425 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದು, ಪೂರ್ಣಗೊಂಡ ಕಾಮಗಾರಿಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಪರಿಶೀಲನೆ ವೇಳೆ ಆಯುಕ್ತರಾದ ರಾಜೇಂದ್ರ ಚೋಳನ್, ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ. ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತ ವೆಂಕಟ ಚಲಪತಿ, ಮುಖ್ಯ ಅಭಿಯಂತರರು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande