
ಜೈಪುರ, 25 ಮೇ (ಹಿ.ಸ.) :
ಆ್ಯಂಕರ್ : ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಸೋಮವಾರ ಮಧ್ಯಾಹ್ನ ಜೈಪುರಕ್ಕೆ ಆಗಮಿಸಿ ರಾಜಸ್ಥಾನದ ಪ್ರಮುಖ ಪಾರಂಪರಿಕ ತಾಣವಾದ ಆಮೇರ್ ಅರಮನೆ ವೀಕ್ಷಿಸಿದರು. ಅವರೊಂದಿಗೆ ಪತ್ನಿ ಜೆನೆಟ್ ಡಿ. ರುಬಿಯೋ ಹಾಗೂ ಅಮೆರಿಕದ ರಾಯಭಾರಿ ಸರ್ಜಿಯೋ ಗಾರ್ ಸಹ ಉಪಸ್ಥಿತರಿದ್ದರು.
ಅವರು ಸುಮಾರು ಮಧ್ಯಾಹ್ನ 1:45ಕ್ಕೆ ಆಗ್ರಾದಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿಂದ ನೇರವಾಗಿ ಅವರು ಆಮೇರ್ ಅರಮನೆಗೆ ತೆರಳಿದರು. ಅರಮನೆಯ ಜಲೇಬಿ ಚೌಕ್ನಲ್ಲಿ ರಾಜಸ್ಥಾನದ ಪರಂಪರೆಯ ಶೈಲಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಸ್ವಾಗತ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ರಾಜಸ್ಥಾನಿ ಜನಪದ ನೃತ್ಯಗಳಾದ ಘೂಮರ್, ಕಾಲಬೆಲಿಯಾ ಹಾಗೂ ಕಚ್ಚಿ ಘೋಡಿ ಪ್ರದರ್ಶನ ನೀಡಿದರು. ಈ ಸಾಂಸ್ಕೃತಿಕ ಪ್ರದರ್ಶನಗಳು ವಿದೇಶಾಂಗ ಸಚಿವರಿಗೆ ರಾಜಸ್ಥಾನದ ಶ್ರೀಮಂತ ಪರಂಪರೆಯನ್ನು ಪರಿಚಯಿಸಿದವು.
ಆಮೇರ್ ಅರಮನೆಯ ಪ್ರವಾಸದ ವೇಳೆ ಮಾರ್ಗದರ್ಶಕರು ಅವರಿಗೆ ಶೀಶಮಹಲ್, ಗಣೇಶ್ ಪೋಲ್, ದಿವಾನೇ ಆಮ್, ದಿವಾನೇ ಖಾಸ್, ಸುಖ ನಿವಾಸ ಹಾಗೂ ಮಾವಠಾ ಸರೋವರದ ಇತಿಹಾಸ ಮತ್ತು ವೈಶಿಷ್ಟ್ಯಗಳ ಕುರಿತು ವಿವರ ನೀಡಿದರು.
ಆಮೇರ್ ಭೇಟಿ ಬಳಿಕ ರುಬಿಯೋ ಅವರು ಜೈಪುರದ ಎಲಿಫೆಂಟ್ ವಿಲೇಜ್ ಹಾಗೂ ಸಿಟಿ ಪ್ಯಾಲೇಸ್ ವೀಕ್ಷಿಸಿದ್ದು. ನಂತರ ಅವರು ಐತಿಹಾಸಿಕ ರಾಮ್ಬಾಗ್ ಅರಮನೆ, ಜೈಪುರ ಹೋಟೆಲ್ನಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ.
ಭದ್ರತಾ ದೃಷ್ಟಿಯಿಂದ ನಗರದಲ್ಲಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಪ್ರವಾಸದ ಅವಧಿಯಲ್ಲಿ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.