
ಬೆಂಗಳೂರು, 25 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಯಾಧುನಿಕ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ಸರ್ಕಾರಿ ಸ್ವಾಮ್ಯದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರವು ತುರ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ನಿರ್ಮಿಸಲಾದ ಈ ಕೇಂದ್ರವು 108 ಆಂಬುಲೆನ್ಸ್ ಸೇವೆ ಹಾಗೂ 104 ಆರೋಗ್ಯ ಸಹಾಯವಾಣಿಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸುವ ಮೂಲಕ ಕಾರ್ಯನಿರ್ವಹಿಸಲಿದೆ. “ಒಂದು ಕರೆ ನಮ್ಮದು, ತ್ವರಿತ ಸೇವೆ ನಿಮಗೆ” ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಿಗೆ 24x7 ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ.
30 ಸೆಕೆಂಡ್ ನಲ್ಲಿ ತುರ್ತು ಸೇವೆ ಆರಂಭ:
ತುರ್ತು ಸಂದರ್ಭಗಳಲ್ಲಿ ಕೇವಲ 30 ಸೆಕೆಂಡ್ಗಳೊಳಗೆ ಸೇವೆ ಪ್ರಾರಂಭಿಸುವ ವ್ಯವಸ್ಥೆ ಈ ಕೇಂದ್ರದಲ್ಲಿ ಕಲ್ಪಿಸಲಾಗಿದೆ. ಅಪಘಾತ, ಗರ್ಭಿಣಿಯರ ತುರ್ತು ಪರಿಸ್ಥಿತಿ, ಆರೋಗ್ಯ ತೊಂದರೆಗಳು ಹಾಗೂ ಇತರೆ ತುರ್ತು ಪ್ರಕರಣಗಳಿಗೆ ತಕ್ಷಣ ಸ್ಪಂದಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.
ರಾಜ್ಯಾದ್ಯಂತ ಜಿಐಎಸ್ ಆಧಾರಿತ ನಿಗಾ:
ರಾಜ್ಯದ ಎಲ್ಲ ಜಿಲ್ಲೆಗಳ ಆಂಬುಲೆನ್ಸ್ ಸೇವೆಗಳನ್ನು ಜಿಐಎಸ್ ಆಧಾರಿತ ವ್ಯವಸ್ಥೆಯ ಮೂಲಕ ನೇರವಾಗಿ ನಿಗಾವಹಿಸಲಾಗುತ್ತದೆ. ರಿಯಲ್ ಟೈಮ್ ಮಾನಿಟರಿಂಗ್, ಡಿಜಿಟಲ್ ಟ್ರ್ಯಾಕಿಂಗ್ ಮತ್ತು ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳು ಈ ಕೇಂದ್ರದ ಪ್ರಮುಖ ವಿಶೇಷತೆಗಳಾಗಿವೆ.
ಸಾವಿರಾರು ಜನರಿಗೆ ನೆರವಾಗುವ ವ್ಯವಸ್ಥೆ:
ರಾಜ್ಯದಾದ್ಯಂತ 108 ಹಾಗೂ 104 ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಸಮಗ್ರ ಕಮಾಂಡ್ ಸೆಂಟರ್ ನೆರವಾಗಲಿದೆ. ಗ್ರಾಮೀಣ ಪ್ರದೇಶಗಳಿಗೂ ತ್ವರಿತ ಆರೋಗ್ಯ ಸೇವೆ ತಲುಪಿಸುವ ಗುರಿ ಹೊಂದಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕಂಟ್ರೋಲ್ ಸೆಂಟರ್ ನಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.