
ವಿಜಯಪುರ, 02 ಮೇ (ಹಿ.ಸ.) :
ಆಂಕರ್ : ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯಿಂದ 18 ರಿಂದ 20 ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಪಿ. ರಾಜೀವ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಹೋರಾಟದ ಮೂಲಕ ಅಧಿಕಾರಕ್ಕೆ ಬಂದು ಜನಪರ ಆಡಳಿತ ನಡೆಸಿದ ಮಹಾನ್ ನಾಯಕರು. ಅವರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಅಭಿಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ವಿಜಯಪುರ ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಲ್ಲಿ ಸಭೆ ನಡೆಸಿ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿದೆ ಎಂದರು.
ಭಾಗ್ಯಲಕ್ಷ್ಮಿ ಹಾಗೂ ಮಕ್ಕಳಿಗೆ ಸೈಕಲ್ ಯೋಜನೆಗಳು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಮಹತ್ವದ ಯೋಜನೆಗಳಾಗಿದ್ದು, ಈ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಮಠಾಧೀಶರು ಮತ್ತು ಯಡಿಯೂರಪ್ಪ ಅವರ ಹೋರಾಟದ ಸಹಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮಿತ್ ಶಾ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. 12 ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಹಾಗೂ ಬಿಸಿಲಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ವಾತಾನೂಕೂಲ ಶಾಮಿಯಾನಗಳನ್ನು ಅಳವಡಿಸುವ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.
ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಬಿಜೆಪಿ ಸಂಘಟನೆಯನ್ನು ಬಲಪಡಿಸಿದ ಯಡಿಯೂರಪ್ಪ ಪಕ್ಷದ ಆಧಾರಸ್ತಂಭರಾಗಿದ್ದಾರೆ. ಅವರು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಿದ ಅಜಾತಶತ್ರು ನಾಯಕರು ಎಂದು ಹೇಳಿದರು. ಅಭಿಮಾನೋತ್ಸವ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಹಬ್ಬದಂತೆಯೇ ಪರಿಣಮಿಸಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರ ಜಿಲ್ಲೆಯ ಪರವಾಗಿ ಅನೇಕ ಹೋರಾಟಗಳನ್ನು ನಡೆಸಿದ ಯಡಿಯೂರಪ್ಪ ಅತಿವೃಷ್ಟಿಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿರುಸಿನ ಹೋರಾಟ ನಡೆಸಿದ್ದರು. ಮಳೆಯಲ್ಲಿಯೇ ಜನರ ಪರ ನಿಂತ ದಿಟ್ಟ ನಾಯಕರು ಎಂದು ಸ್ಮರಿಸಿದರು.
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಆಟೋರಿಕ್ಷಾ, ಬಸ್, ಸೈಕಲ್ ಮೂಲಕ ಸಂಚರಿಸಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅವರು ಕೊಟ್ಟ ಮಾತಿನಂತೆ ನಡೆಯುವ ಧೀಮಂತ ನಾಯಕರು ಎಂದು ಪ್ರಶಂಸಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande