
ರಾಯ್ಪುರ, 18 ಮೇ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢ ರಾಜ್ಯದಲ್ಲಿ ತುರ್ತು ಸೇವೆಗಳನ್ನು ಮತ್ತಷ್ಟು ವೇಗವಾಗಿ ಹಾಗೂ ತಂತ್ರಜ್ಞಾನ ಆಧಾರಿತವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಆರಂಭಿಸಲಾದ ಅತ್ಯಾಧುನಿಕ ‘ನೆಕ್ಸ್ಟ್ ಜೆನ್ ಸಿಜಿ ಡಯಲ್-112’ ಸೇವೆ ಹಾಗೂ ಮೊಬೈಲ್ ಫೋರೆನ್ಸಿಕ್ ವ್ಯಾನ್ಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಚಾಲನೆ ನೀಡಿದರು.
ರಾಯ್ಪುರದ ಮಾನಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು 400 ಅತ್ಯಾಧುನಿಕ ಡಯಲ್-112 ವಾಹನಗಳು ಮತ್ತು 32 ಸಂಚಾರಿ ಫೋರೆನ್ಸಿಕ್ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ವಿಧಾನಸಭಾಧ್ಯಕ್ಷ ರಮಣ್ ಸಿಂಗ್, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ವಿಜಯ್ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಅರುಣ್ ದೇವ್ ಗೌತಮ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
‘ಎಕ್ಕೆ ನಂಬರ್, ಸಬ್ಬೊ ಬಾರ್’ ಎಂಬ ಧ್ಯೇಯದಡಿ ಆರಂಭಿಸಲಾದ ಈ ಸೇವೆ ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸಲಿದೆ. ಜನರು ಒಂದೇ ಸಂಖ್ಯೆಗೆ ಕರೆ ಮಾಡುವ ಮೂಲಕ ತಕ್ಷಣದ ನೆರವು ಪಡೆಯಬಹುದಾಗಿದೆ.
ಯೋಜನೆಯಡಿ ಕಾರ್ಯ ನಿರ್ವಹಿಸಲಿರುವ ವಾಹನಗಳಲ್ಲಿ ಸ್ಮಾರ್ಟ್ಫೋನ್, ಜಿಪಿಎಸ್, ವೈರ್ಲೆಸ್ ರೇಡಿಯೋ, ಪಿಟಿಝಡ್ ಕ್ಯಾಮೆರಾ, ಡ್ಯಾಶ್ ಕ್ಯಾಮ್, ಮೊಬೈಲ್ ಎನ್ವಿಆರ್ ಮತ್ತು ಸೋಲಾರ್ ಬ್ಯಾಕಪ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸ್ಥಳದ ನೇರ ಮೇಲ್ವಿಚಾರಣೆ, ನೈಜ-ಸಮಯದ ಟ್ರ್ಯಾಕಿಂಗ್ ಹಾಗೂ ತ್ವರಿತ ಸಂವಹನ ಸಾಧ್ಯವಾಗಲಿದೆ.
ಈ ಸೇವೆ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿದ್ದು, ಜಿಐಎಸ್ ಆಧಾರಿತ ಮೇಲ್ವಿಚಾರಣೆ, ಸುಧಾರಿತ ವಾಹನ ಟ್ರ್ಯಾಕಿಂಗ್, ಎಸ್ಐಪಿ ಟ್ರಂಕ್ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಕಾಲರ್ ಸ್ಥಳ ಗುರುತಿಸುವಿಕೆ ವ್ಯವಸ್ಥೆಗಳನ್ನು ಬಳಸಲಿದೆ. ರಾಜ್ಯದ ಎಲ್ಲಾ 33 ಜಿಲ್ಲಾ ಸಮನ್ವಯ ಕೇಂದ್ರಗಳನ್ನು ಈ ಜಾಲಕ್ಕೆ ಸಂಪರ್ಕಿಸಲಾಗಿದೆ.
ಧ್ವನಿ ಕರೆ, ಎಸ್ಎಂಎಸ್, ಇ-ಮೇಲ್, ವೆಬ್ ಪೋರ್ಟಲ್, ವಾಟ್ಸ್ಆ್ಯಪ್, ಚಾಟ್ಬಾಟ್ ಹಾಗೂ ಎಸ್ಒಎಸ್-112 ಇಂಡಿಯಾ ಆ್ಯಪ್ ಮೂಲಕ ಸಹ ನಾಗರಿಕರು ನೆರವು ಪಡೆಯಬಹುದಾಗಿದೆ.
ಇದೇ ವೇಳೆ ಆರಂಭಿಸಲಾದ 32 ಮೊಬೈಲ್ ಫೋರೆನ್ಸಿಕ್ ವಾಹನಗಳು ರಾಜ್ಯದ ಅಪರಾಧ ತನಿಖಾ ವ್ಯವಸ್ಥೆಗೆ ಹೊಸ ಬಲ ನೀಡಲಿವೆ. “32 ವ್ಯಾನ್ಗಳು – 32 ಜಿಲ್ಲೆಗಳು – ಒಂದು ಸಂಕಲ್ಪ: ನಿಖರ ತನಿಖೆ, ತ್ವರಿತ ನ್ಯಾಯ” ಎಂಬ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ.
ಪ್ರತಿ ಘಟಕಕ್ಕೆ ಸುಮಾರು ₹65 ಲಕ್ಷ ವೆಚ್ಚದ ಈ ಅತ್ಯಾಧುನಿಕ ವಾಹನಗಳಲ್ಲಿ ದೃಶ್ಯ ಸಂರಕ್ಷಣಾ ಕಿಟ್, ಸಾಕ್ಷ್ಯ ಸಂಗ್ರಹ ಮತ್ತು ಸೀಲಿಂಗ್ ಉಪಕರಣಗಳು, ಬೆರಳಚ್ಚು ಪತ್ತೆ ವ್ಯವಸ್ಥೆ, ಮಾದಕವಸ್ತು ಪರೀಕ್ಷಾ ಕಿಟ್, ಡಿಜಿಟಲ್ ಫೋರೆನ್ಸಿಕ್ ನೆರವು, ಉನ್ನತ ಗುಣಮಟ್ಟದ ಛಾಯಾಗ್ರಹಣ ವ್ಯವಸ್ಥೆ, ಬ್ಯಾಲಿಸ್ಟಿಕ್ ತನಿಖಾ ಕಿಟ್ ಮತ್ತು ಗನ್ಶಾಟ್ ರೆಸಿಡ್ಯೂ ಪರೀಕ್ಷಾ ವ್ಯವಸ್ಥೆ ಸೇರಿದಂತೆ ಹಲವು ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ಸಂಚಾರಿ ಫೋರೆನ್ಸಿಕ್ ವಾಹನಗಳ ಮೂಲಕ ಅಪರಾಧ ಸ್ಥಳದಲ್ಲೇ ಪ್ರಾಥಮಿಕ ವೈಜ್ಞಾನಿಕ ತನಿಖೆ, ಸಾಕ್ಷ್ಯ ಸಂರಕ್ಷಣೆ, ಪರೀಕ್ಷೆ ಮತ್ತು ಡಿಜಿಟಲ್ ದಾಖಲಾತಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಲಿದ್ದು, ತನಿಖೆಯ ಗುಣಮಟ್ಟ ಮತ್ತು ವೇಗ ಎರಡೂ ಹೆಚ್ಚುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.