ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ಡಾ. ಶ್ರೀಕಾಂತ ಕಾಟೇವಲು
ಗದಗ, 14 ಮೇ (ಹಿ.ಸ.): ಆ್ಯಂಕರ್: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ
ಫೋಟೋ


ಗದಗ, 14 ಮೇ (ಹಿ.ಸ.):

ಆ್ಯಂಕರ್: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲ ಅವರು, ಸಮಾಜದಲ್ಲಿ ದಾದಿಯರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಆರೋಗ್ಯ ವ್ಯವಸ್ಥೆಯ ನಿಜವಾದ ಬೆನ್ನೆಲುಬೇ ದಾದಿಯರು ಎಂದು ಅಭಿಪ್ರಾಯಪಟ್ಟರು.

ಪ್ರಪಂಚದಾದ್ಯಂತ ಕಾಯಿಲೆಯಿಂದ ಬಳಲುತ್ತಿರುವ ಜನರ ಆರೈಕೆ, ಉಪಚಾರ ಮತ್ತು ಯೋಗಕ್ಷೇಮದಲ್ಲಿ ನರ್ಸ್ಗಳ ಪಾತ್ರ ಅಪಾರವಾಗಿದೆ. ವೈದ್ಯರು ಚಿಕಿತ್ಸೆ ನೀಡಿದರೂ, ರೋಗಿಗಳ ಹತ್ತಿರ ನಿಂತು ಹಗಲಿರುಳು ಸೇವೆ ಸಲ್ಲಿಸುವವರು ದಾದಿಯರು. ತಮ್ಮ ವೈಯಕ್ತಿಕ ಸುಖ-ದುಃಖಗಳನ್ನು ಬದಿಗಿಟ್ಟು, ಜೀವ ರಕ್ಷಣೆಗಾಗಿ ಶ್ರಮಿಸುವ ಅವರ ಸೇವೆ ಮಾನವೀಯತೆಯ ಉನ್ನತ ಉದಾಹರಣೆಯಾಗಿದೆ ಎಂದು ಹೇಳಿದರು.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ದಾದಿಯರು ಮಾಡುತ್ತಾರೆ. ಒಂದು ಆಸ್ಪತ್ರೆಯ ಗುಣಮಟ್ಟವನ್ನು ಅಲ್ಲಿನ ದಾದಿಯರ ಸೇವಾ ಮನೋಭಾವವೇ ನಿರ್ಧರಿಸುತ್ತದೆ. ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲೂ ದಾದಿಯರು, ಸಿಬ್ಬಂದಿ ಹಾಗೂ ವೈದ್ಯರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಕಾರಣ ಆಸ್ಪತ್ರೆಗೆ ಜನರ ವಿಶ್ವಾಸ ಹೆಚ್ಚುತ್ತಿದೆ ಎಂದು ತಿಳಿಸಿದರು.

“ರೋಗಿಗಳ ನೋವಿಗೆ ಸ್ಪಂದಿಸಿ ಹಗಲಿರುಳೆನ್ನದೆ ಸೇವೆ ಸಲ್ಲಿಸುವ ದಾದಿಯರ ಸೇವೆಯನ್ನು ಸಮಾಜ ಎಂದಿಗೂ ಮರೆಯಬಾರದು. ಅವರ ಸೇವೆಗೆ ಗೌರವ ಸಲ್ಲಿಸುವ ಸಂಸ್ಕೃತಿ ಬೆಳೆಬೇಕು” ಎಂದು ಡಾ. ಶ್ರೀಕಾಂತ ಕಾಟೇವಾಲ ಹೇಳಿದರು.

ಪ್ರತಿ ವರ್ಷ ಮೇ 12ರಂದು ಆಧುನಿಕ ನರ್ಸಿಂಗ್ ಪದ್ಧತಿಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಗುತ್ತದೆ. ನರ್ಸಿಂಗ್ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಹೆಸರಿನ ಪ್ರತಿಷ್ಠಿತ ‘ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಪಟ್ಟಣದಲ್ಲಿ ಸೇವೆ ಸಲ್ಲಿಸಿದ್ದ ದಾದಿ ಶಕುಂತಲಾ ಅವರಿಗೆ ಲಭಿಸಿರುವುದು ಲಕ್ಷ್ಮೇಶ್ವರ ಪಟ್ಟಣದ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಅಶೋಕ ಸೊರಟೂರ ಮಾತನಾಡಿ, ವೈದ್ಯರಿಗಿಂತ ಮೊದಲು ರೋಗಿಗಳ ಆರೈಕೆಗೆ ಧಾವಿಸುವವರು ದಾದಿಯರು. ರೋಗಿಯ ನೋವನ್ನು ಅರ್ಥಮಾಡಿಕೊಂಡು ಅವರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯವನ್ನು ಅವರು ಮಾಡುತ್ತಾರೆ ಎಂದರು.

ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದ್ದಾಗ ದಾದಿಯರು ತಮ್ಮ ಜೀವದ ಹಂಗನ್ನೇ ತೊರೆದು ಜನರ ಸೇವೆ ಮಾಡಿದರು. ಸೋಂಕಿನ ಭೀತಿ ನಡುವೆಯೂ ಆಸ್ಪತ್ರೆಗಳಲ್ಲಿ ನಿರಂತರ ಸೇವೆ ಸಲ್ಲಿಸಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಆ ಸಂದರ್ಭ ದಾದಿಯರ ತ್ಯಾಗ ಮತ್ತು ಸೇವಾ ಮನೋಭಾವವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

“ಸೇವೆಯೇ ಪರಮಧರ್ಮ” ಎಂಬ ತತ್ವದಡಿ ದಾದಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ವ್ಯವಸ್ಥೆ ಸುಗಮವಾಗಿ ನಡೆಯಲು ವೈದ್ಯರು, ಸಿಬ್ಬಂದಿ ಹಾಗೂ ದಾದಿಯರ ಸಮನ್ವಯ ಅತ್ಯಗತ್ಯ. ದಾದಿಯರ ಸೇವೆಯನ್ನು ಕೇವಲ ಉದ್ಯೋಗ ಎಂದು ನೋಡದೆ, ಮಾನವೀಯ ಮೌಲ್ಯಗಳ ಪ್ರತೀಕವಾಗಿ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ದಾದಿಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ದಾದಿಯರ ಸೇವೆಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರವೀಣ ಸಜ್ಜನ, ಡಾ. ಬಿಸ್ಮಿಲ್ಲಾ, ಸುನೀಲ ಚವ್ಹಾಣ, ವಿಜಯಕುಮಾರ ಮಾಂಡ್ರೆ, ಸುನೀತಾ ನಂದೆಣ್ಣವರ, ಲಕ್ಷ್ಮೀ ಜನಿವಾರದ, ಶ್ರೀಶೈಲ ಫಕ್ಕೀರಶೆಟ್ಟಿ, ಲಕ್ಷ್ಮೀ ಡೊಳ್ಳಿನ್, ಸುವರ್ಣ ಹವಾಲ್ದಾರ, ಆಶಾ ಭಂಡಾರಿಮಠ, ರತ್ನಾ ದಂಡಿನ, ಶಕೀಲಾಬಾನು ಎಂ., ಬಸವರಾಜ ಕರ್ಕಿಕಟ್ಟಿ, ಸಹಾಯಕಿ ಪಾರ್ವತಿ ಲಮಾಣಿ, ಪತ್ರಕರ್ತರಾದ ದಿಗಂಬರ ಪೂಜಾರ, ನಾಗರಾಜ ಹಣಗಿ, ಶಿವಲಿಂಗಯ್ಯ ಹೊತಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ನಡೆದ ಈ ಕಾರ್ಯಕ್ರಮ ದಾದಿಯರ ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸುವ ಜೊತೆಗೆ, ಆರೋಗ್ಯ ಕ್ಷೇತ್ರದಲ್ಲಿ ಅವರ ಮಹತ್ವವನ್ನು ಸಮಾಜಕ್ಕೆ ಮತ್ತೊಮ್ಮೆ ಮನದಟ್ಟು ಮಾಡಿಕೊಟ್ಟಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande