ಭಕ್ತಿಭಾವದಲ್ಲಿ ವಿಜೃಂಭಣೆಯ ರಥೋತ್ಸವ
ಗದಗ, 14 ಮೇ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಗ್ರಾಮದ ಆರಾಧ್ಯದೈವ ಶ್ರೀ ಗುಂಡೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಸಂಜೆ ಗೋಧೂಳಿ ವೇಳೆಯಲ್ಲಿ ನಡೆದ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾಮಹೋತ್ಸವ ಹಿನ್ನೆಲೆಯ
ಫೋಟೋ


ಗದಗ, 14 ಮೇ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಗ್ರಾಮದ ಆರಾಧ್ಯದೈವ ಶ್ರೀ ಗುಂಡೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಸಂಜೆ ಗೋಧೂಳಿ ವೇಳೆಯಲ್ಲಿ ನಡೆದ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಯಳವತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಭಕ್ತಿಭಾವ ಮೆರೆದರು. “ಹರ ಹರ ಮಹಾದೇವ”, “ಶ್ರೀ ಗುಂಡೇಶ್ವರ ಮಹಾರಾಜ ಕೀ ಜೈ” ಎಂಬ ಜಯಘೋಷಗಳಿಂದ ಗ್ರಾಮವೆಲ್ಲಾ ಮೊಳಗಿತು. ರಥೋತ್ಸವದ ವೇಳೆ ಭಕ್ತರ ಸಂಭ್ರಮ, ಭಜನೆ ಹಾಗೂ ವಾದ್ಯಗಳ ನಾದ ಜಾತ್ರೆಗೆ ವಿಶೇಷ ಕಳೆ ತಂದಿತು.

ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ಮಹಿಳೆಯರು, ಮಕ್ಕಳು ಹಾಗೂ ಯುವಕರು ಹೊಸ ಉಡುಪು ಧರಿಸಿ ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸಿದರು. ಭಕ್ತರು ಹಣ್ಣು-ಕಾಯಿ ನೈವೇದ್ಯ ಸಮರ್ಪಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನೇಕರು ರಥಕ್ಕೆ ಉಡಿ ತುಂಬಿ, ಹೊಸ ವಸ್ತ್ರಾಭರಣಗಳನ್ನು ಅರ್ಪಿಸಿ ತಮ್ಮ ಹರಕೆ ತೀರಿಸಿದರು.

ಸಂಜೆ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ಆರಂಭಗೊಂಡಿತು. ರಥ ಸಾಗುವ ವೇಳೆ ಭಕ್ತರು ಉತ್ತತ್ತಿ, ಹಣ್ಣುಗಳನ್ನು ತೇರಿನ ಮೇಲೆ ಎಸೆದು ಸಂಭ್ರಮಿಸಿದರು. ರಥೋತ್ಸವದ ಉದ್ದಕ್ಕೂ ಭಕ್ತರ ಭಕ್ತಿಭಾವ ಹಾಗೂ ಧಾರ್ಮಿಕ ಉತ್ಸಾಹ ಗಮನಸೆಳೆಯಿತು.

ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಸಂಪ್ರದಾಯಬದ್ಧ “ಕಡುಬಿನ ಕಾಳಗ” ಕಾರ್ಯಕ್ರಮ ನಡೆಯಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಹ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.

ಈ ಭಾಗದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿ ಪ್ರಸಿದ್ಧಿಯಾಗಿರುವ ಶಿರಹಟ್ಟಿ ಫಕ್ಕಿರೇಶ್ವರ ಮಠದ ಜಾತ್ರೆಯ 9ನೇ ದಿನ ನಡೆಯುವ ಗುಂಡೇಶ್ವರ ಜಾತ್ರೆಯೊಂದಿಗೆ ಈ ಭಾಗದ ಜಾತ್ರಾಮಹೋತ್ಸವಗಳಿಗೆ ತೆರೆ ಬೀಳಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande