
ಮೈಸೂರು, 14 ಮೇ (ಹಿ.ಸ.) :
ಆ್ಯಂಕರ್ : ಮೈಸೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಹಾಗೂ ಗುಣಮಟ್ಟದಲ್ಲಿ ಯಾವುದೇ ಲೋಪವಾಗಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪರಿವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರ ಅಭಿವೃದ್ಧಿ ಕಾರ್ಯಗಳ ವೇಗ ಹಾಗೂ ಗುಣಮಟ್ಟ ಎರಡನ್ನೂ ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಕೆಪಿಟಿಸಿಎಲ್ ವತಿಯಿಂದ ಸುಮಾರು 871 ಕಿಲೋಮೀಟರ್ ಉದ್ದದ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಇದುವರೆಗೆ 277 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಈ ಯೋಜನೆಯಿಂದ ಮೈಸೂರು ನಗರದ ಸೌಂದರ್ಯೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಸಂಬಂಧಿಸಿದಂತೆ ಸ್ಥಳಾವಕಾಶದ ಕೊರತೆ ಇರುವುದರಿಂದ, ಸುಮಾರು 1,400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಅವರು, ಸುಮಾರು 50 ಕಿಲೋಮೀಟರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಗಳು ಸುಮಾರು 30 ವರ್ಷಗಳವರೆಗೆ ದೀರ್ಘಕಾಲ ಸೇವೆ ನೀಡಲಿವೆ ಎಂದು ಹೇಳಿದರು. ಮೊದಲ ಹಂತದಲ್ಲಿ ನಾಲ್ಕು ಪಥದ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗಿದ್ದು, ನಂತರದ ಹಂತದಲ್ಲಿ ಉಳಿದ ರಸ್ತೆಗಳಿಗೆ ವಿಸ್ತರಿಸಲಾಗುವುದು ಎಂದು ವಿವರಿಸಿದರು. ಈ ಕಾಮಗಾರಿಯಿಂದ ಸಂಚಾರ ಸುಗಮವಾಗಲಿದೆ ಹಾಗೂ ವಾಹನ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ನಗರದ ಅಭಿವೃದ್ಧಿ ಕುರಿತು ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಮೈಸೂರಿನ ರಸ್ತೆ ಹಾಗೂ ಒಳಚರಂಡಿ ಸೇರಿದಂತೆ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಸರ್ಕಾರವೇ ಕೈಗೊಂಡಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪರ ಯೋಜನೆಗಳು ಸಮರ್ಪಕವಾಗಿ ನಡೆಯಲಿಲ್ಲ ಎಂದು ಅವರು ಆರೋಪಿಸಿದರು.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡಗಳ ಪಾರಂಪರಿಕ ವಿನ್ಯಾಸವನ್ನು ಕಾಯ್ದುಕೊಂಡು ಪುನರ್ ನಿರ್ಮಾಣ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ತಿಳಿಸಿದ ಅವರು, ಈ ವಿಷಯವು ನ್ಯಾಯಾಲಯದ ಹಂತದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಮುಂದುವರಿಯಲಾಗುತ್ತದೆ ಎಂದು ಹೇಳಿದರು. ಸ್ಥಳೀಯ ಶಾಸಕರೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.