
ಗದಗ, 13 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದ ಗಡ್ಡಿಬಸವೇಶ್ವರ ನಡುಗಡ್ಡೆಯಲ್ಲಿ ಹುಣಸೆ ಮರದಲ್ಲಿ ನಂದಿಯ ಸ್ವರೂಪ ಕಾಣಿಸಿಕೊಂಡಿರುವ ಘಟನೆ ಭಕ್ತರಲ್ಲಿ ಅಪಾರ ಕುತೂಹಲ ಹಾಗೂ ಭಕ್ತಿ ಭಾವ ಮೂಡಿಸಿದೆ.
ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ಗಡ್ಡಿಬಸವೇಶ್ವರ ಹಾಗೂ ವೀರಭದ್ರೇಶ್ವರ ಸನ್ನಿಧಾನ ಈ ಭಾಗದ ಜನರ ಆರಾಧ್ಯ ದೈವವಾಗಿದೆ. ಈ ಪವಿತ್ರ ಸ್ಥಳದಲ್ಲಿರುವ ಹಳೆಯ ಹುಣಸೆ ಮರದ ತೊಗಟೆಯಲ್ಲಿ ಅಚ್ಚು ಹಾಕಿದಂತೆಯೇ ನಂದಿಯ ಆಕೃತಿ ಮೂಡಿರುವುದು ಸ್ಥಳೀಯರನ್ನು ಅಚ್ಚರಿಗೆ ದೂಡಿದೆ.
ಮರದ ಮೇಲ್ಭಾಗದಲ್ಲಿ ಮೂಡಿರುವ ಸ್ವಾಭಾವಿಕ ಆಕೃತಿ ಬಸವಣ್ಣನ ಮುಖ ಹಾಗೂ ದೇಹದಾಕೃತಿಯಂತೆ ಸ್ಪಷ್ಟವಾಗಿ ಕಾಣುತ್ತಿದ್ದು, ಇದನ್ನು ಕಂಡ ಗ್ರಾಮಸ್ಥರು ದೇವರ ಮಹಿಮೆಯೆಂದು ಭಾವಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಾಸರವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಸ್ಥಳಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಕೆಲವರು ಭಕ್ತರು ಮರಕ್ಕೆ ಹೂವು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ನಂದಿದೇವರ ಕೃಪೆಯ ಸಂಕೇತವೆಂದು ನಂಬಿದ್ದಾರೆ. ಸ್ಥಳೀಯ ಹಿರಿಯರು ಕೂಡ ಇಂತಹ ದೃಶ್ಯವನ್ನು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗಡ್ಡಿಬಸವೇಶ್ವರ ನಡುಗಡ್ಡೆ ಈಗ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚುತ್ತಿದೆ. ಮರದಲ್ಲಿ ಮೂಡಿದ ನಂದಿ ಸ್ವರೂಪದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಜನರಲ್ಲಿ ಭಕ್ತಿ ಭಾವ ಹೆಚ್ಚಿಸಿದೆ.
ಒಟ್ಟಾರೆ, ಪ್ರಕೃತಿಯಲ್ಲೇ ದೈವದ ರೂಪ ಕಾಣಿಸಿಕೊಂಡಿದೆ ಎಂಬ ನಂಬಿಕೆಯಲ್ಲಿ ಭಕ್ತರು ಹುಣಸೆ ಮರದ ನಂದಿ ಸ್ವರೂಪವನ್ನು ಭಕ್ತಿಭಾವದಿಂದ ಪೂಜಿಸುತ್ತಿದ್ದು, ಸಾಸರವಾಡ ಗ್ರಾಮ ಇದೀಗ ಈ ಅಚ್ಚರಿಯ ಘಟನೆಯಿಂದ ಗಮನ ಸೆಳೆದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP