
ಬಾಗಲಕೋಟೆ, 13 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ
ಬಾದಾಮಿ ನಗರದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ವೀರಪುಲಿಕೇಶಿ ಬ್ಯಾಂಕಿನ ನೂತನ ಪ್ರಧಾನ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭವು ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದ ಬ್ಯಾಂಕಿನ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಆಧುನಿಕ ಹಾಗೂ ಸುಸಜ್ಜಿತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸುಮಾರು ರೂ.2 ಕೋಟಿ ವೆಚ್ಚದಲ್ಲಿ 5400 ಚದರ ಅಡಿ ವ್ಯಾಪ್ತಿಯಲ್ಲಿ ಈ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಮೊದಲ ಮಹಡಿಯಲ್ಲಿ ಬ್ಯಾಂಕಿನ ಕಚೇರಿ ಹಾಗೂ ಎರಡನೇ ಮಹಡಿಯಲ್ಲಿ ಹವಾನಿಯಂತ್ರಿತ ಸಭಾಭವನ ನಿರ್ಮಿಸಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೆ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಹಾವೇರಿ ಹುಕ್ಕೇರಿಮಠದ ಡಾ. ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಸಂಸ್ಥಾಪಕ ಅಧ್ಯಕ್ಷರ ಪುತ್ಥಳಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮವನ್ನು ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಲಿಂ. ಸದಾಶಿವ ಮಹಾಸ್ವಾಮಿಗಳ ಭಾವಚಿತ್ರವನ್ನು ಮುರುಗೇಶ್ ನಿರಾಣಿ ಅನಾವರಣಗೊಳಿಸಲಿದ್ದು, ಹಿಂದಿನ ಅಧ್ಯಕ್ಷರ ಭಾವಚಿತ್ರಗಳನ್ನು ಮಾಜಿ ಸಚಿವ ಬಿ ಶ್ರೀರಾಮಲು ಅನಾವರಣ ಮಾಡುವರು.
ಕಾರ್ಯಕ್ರಮದಲ್ಲಿ ಸಂಸದ ಪೀ ಸಿ ಸಿದ್ದನಗೌಡ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಹನಮಂತ ನಿರಾಣಿ, ಅಜಯಕುಮಾರ ಸರನಾಯಕ, ಜಯಣ್ಣ ಮಮದಾಪೂರ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎ.ಸಿ. ಪಟ್ಟಣದ, ಡಿ.ಎಂ. ಪೈಲ್, ವಿ.ಕೆ. ಬಾಗಲೆ, ಬಿ.ಎಂ. ತೆಂಗಿನಕಾಯಿ, ಎಂ.ಎಸ್. ಹಿರೇಹಾಳ, ಚನ್ನಪ್ಪ ಪಟ್ಟಣದ, ಎಂ.ಎಸ್. ತೆಗ್ಗಿನಮನಿ, ವಿ.ಆರ್. ಪಾಟೀಲ, ಎಚ್.ಕೆ. ಬೆಳ್ಳಿಗುಂಡಿ, ಎಂ.ಆರ್. ತಳವಾರ ಹಾಗೂ ಪ್ರಧಾನ ವ್ಯವಸ್ಥಾಪಕಿ ಎಂ.ಬಿ. ದೇಶನ್ನವರ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande