37,500 ಕೋಟಿ ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ
ದೇಶದಾದ್ಯಂತ
Ashwini Vaishnav


ನವದೆಹಲಿ, 13 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ದೇಶದಲ್ಲಿ ಮೇಲ್ಮೈ ಕಲ್ಲಿದ್ದಲು ಹಾಗೂ ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ₹37,500 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಮೂಲಕ 2030ರೊಳಗೆ 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತದಲ್ಲಿ ಸುಮಾರು 200 ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪಗಳಿದ್ದು, ಅವುಗಳನ್ನು ಈಗ ಅನಿಲ ಉತ್ಪಾದನೆಗೆ ಬಳಸುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು. ಈ ಯೋಜನೆಯು ಸುಮಾರು ₹3 ಲಕ್ಷ ಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದರು.

ಅನಿಲೀಕರಣ ಪ್ರಕ್ರಿಯೆಯಿಂದ ದೇಶದ ಇಂಧನ ಆಮದು ಅವಲಂಬನೆ ಕಡಿಮೆಯಾಗಲಿದ್ದು, ದ್ರವೀಕೃತ ನೈಸರ್ಗಿಕ ಅನಿಲ, ಯೂರಿಯಾ, ಅಮೋನಿಯಾ, ಮೆಥನಾಲ್ ಹಾಗೂ ಇತರೆ ರಾಸಾಯನಿಕ ಉತ್ಪನ್ನಗಳ ಆಮದು ತಗ್ಗಲಿದೆ ಎಂದು ಸಚಿವರು ಹೇಳಿದರು.

ಭಾರತವು ವಿಶ್ವದಲ್ಲೇ ಅತಿದೊಡ್ಡ ಕಲ್ಲಿದ್ದಲು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು, ಸುಮಾರು 401 ಶತಕೋಟಿ ಟನ್ ಕಲ್ಲಿದ್ದಲು ಹಾಗೂ 47 ಶತಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿವೆ. ದೇಶದ ಒಟ್ಟು ಇಂಧನ ಬಳಕೆಯ ಶೇಕಡಾ 55 ಕ್ಕೂ ಹೆಚ್ಚು ಭಾಗವನ್ನು ಕಲ್ಲಿದ್ದಲೇ ಪೂರೈಸುತ್ತಿದೆ.

ಕಲ್ಲಿದ್ದಲು ಅನಿಲೀಕರಣದಲ್ಲಿ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನ್ನು “ಸಿಂಗಾಸ್” ಎಂಬ ಸಂಶ್ಲೇಷಿತ ಅನಿಲವಾಗಿ ಪರಿವರ್ತಿಸಲಾಗುತ್ತದೆ. ಈ ಸಿಂಗಾಸ್ ಅನ್ನು ಇಂಧನ, ರಾಸಾಯನಿಕಗಳು ಹಾಗೂ ರಸಗೊಬ್ಬರ ಉತ್ಪಾದನೆಗೆ ಬಳಸಬಹುದು. ಇದರ ಪರಿಣಾಮವಾಗಿ ಎಲ್.ಎನ್.ಜಿ, ಯೂರಿಯಾ, ಅಮೋನಿಯಂ ನೈಟ್ರೇಟ್, ಕೋಕಿಂಗ್ ಕಲ್ಲಿದ್ದಲು ಮತ್ತು ಮೆಥನಾಲ್ಗಳ ಆಮದು ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ.

ಕೇಂದ್ರ ಕಲ್ಲಿದ್ದಲು ಸಚಿವಾಲಯದ ಮಾಹಿತಿ ಪ್ರಕಾರ, ಹೊಸ ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಘಟಕಗಳಿಗೆ ಸ್ಥಾವರ ಹಾಗೂ ಯಂತ್ರೋಪಕರಣ ವೆಚ್ಚದ ಶೇಕಡಾ 20ರವರೆಗೆ ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತದೆ. ಯೋಜನೆಗಳನ್ನು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಒಂದು ಯೋಜನೆಗೆ ಗರಿಷ್ಠ ₹5,000 ಕೋಟಿ ಪ್ರೋತ್ಸಾಹಧನ ನೀಡಬಹುದಾಗಿದ್ದು, ಒಂದೇ ಉತ್ಪನ್ನಕ್ಕೆ ₹9,000 ಕೋಟಿ ಮತ್ತು ಒಂದೇ ಕಂಪನಿ ಗುಂಪಿಗೆ ₹12,000 ಕೋಟಿ ಮಿತಿಯನ್ನು ನಿಗದಿಪಡಿಸಲಾಗಿದೆ.

ಹೂಡಿಕೆದಾರರಿಗೆ ದೀರ್ಘಾವಧಿಯ ಭರವಸೆ ನೀಡುವ ಉದ್ದೇಶದಿಂದ ಕಲ್ಲಿದ್ದಲು ಸಂಪರ್ಕ ಅವಧಿಯನ್ನು 30 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ಸುಮಾರು 25 ಯೋಜನೆಗಳ ಮೂಲಕ 50,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ವರ್ಷಕ್ಕೆ ಸುಮಾರು ₹6,300 ಕೋಟಿ ಆದಾಯ ದೊರೆಯುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande