
ಕೋಲಾರ, ೧೨ ಮೇ (ಹಿ.ಸ) :
ಆ್ಯಂಕರ್ : ಕೇಂದ್ರ ಸರ್ಕಾರ ಪ್ರಕಟಿಸಿದ್ದ ೪ ಕಾರ್ಮಿಕ ಸಂಹಿತೆಗಳ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸದೆ, ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿರುವುದನ್ನು ಕೂಡಲೇ ವಾಪಸು ಪಡೆಯಬೇಕೆಂದು ಸಿಐಟಿಯು ನೇತೃತ್ವದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎನ್ ಮಂಜುನಾಥ್ ಮಾತನಾಡಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟನೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಈಗ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಅಸ್ಸಾಂ ಹಾಗು ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊAದಿಗೆ ಈ ಕಪಟ ಹಾಗು ವಂಚನೆಯನ್ನು ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಮಾಡಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ ೨೦೧೯ರಲ್ಲಿ ವೇತನ ಸಂಹಿತೆ, ೨೦೨೦ರಲ್ಲಿ ಕೈಗಾರಿಕಾ ಸಂಬAಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆಗಳನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಅನುಮೋದನೆಗೊಂಡಿತು. ಈ ಸಂದರ್ಭದಲ್ಲಿ ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ ಎಂದರು
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಮಾತನಾಡಿ ಹಲವಾರು ದಶಕಗಳಿಂದ ಸಮರಧೀರ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶ ಮಾಡುವ ಕ್ರಮವಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗು ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ ಮಾತನಾಡಿ ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತವೆ. ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ ಎಂದು ಟೀಕಿಸುತ್ತದೆ. ಆದ್ದರಿಂದ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವುದನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಗಾಂಧಿನಗರ ನಾರಾಯಣಸ್ವಾಮಿ, ಎ.ಆರ್.ಬಾಬು, ಕಾರ್ಯದರ್ಶಿಗಳಾದ ಎಂ.ಭೀಮರಾಜ್, ವೀರಭದ್ರ, ಶಿವಾನಂದ್, ಕಲ್ಪನಾ, ಅಮರನಾರಾಯಣ, ಕೇಶವರಾವ್, ವಿ.ಮಂಜುಳ, ಲೋಕೇಶ್ವರಿ, ರಾಜಮ್ಮ, ಶಿವರಾಜ್ ಮತ್ತಿತರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್