




ಕೊಪ್ಪಳ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಏಪ್ರಿಲ್ 23 ರಂದು ಆಚರಿಸಲಾಗುವ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಸಮುದಾಯದವರ ಕೋರಿಕೆ ಮೇರೆಗೆ ಸರಳವಾಗಿ ಆಚರಿಸಲಾಗುತ್ತಿದ್ದು, ಅಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಹೇಳಿದರು.
ಅವರು ಬುಧವಾರದಂದು ಶ್ರೀ ಭಗೀರಥ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಅವಧಿಯಾಗಿರುವುದರಿಂದ ಸಾರ್ವಜನಿಕರು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಮುದಾಯದವರ ಆರೋಗ್ಯದ ಹಿತದೃಷ್ಠಿಯಿಂದ ಶ್ರೀ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲು ಸಮುದಾಯದ ಮುಖಂಡರು ಕೋರಿದ್ದು, ಅದರಂತೆ ಸರಳವಾಗಿ ಮಹನೀಯರಿಗೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಗುವುದು. ಅಂದು ಎಲ್ಲ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು ಸರಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಆಹಾರ ಇಲಾಖೆಯ ಉಪನಿರ್ದೇಶಕರಾದ ವಿಶ್ವನಾಥಗೌಡ ಎಂ.ಎನ್., ಡಿಸಿಎಫ್ ಕಚೇರಿಯ ಮಲ್ಲಿಕಾರ್ಜುನ ಗೌಡರ್, ಎಎಸ್ಐ ವೀರಭದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಸಮಾಜದ ಮುಖಂಡರಾದ ಯಲ್ಲಪ್ಪ ಷಣ್ಮುಖಪ್ಪ ರಡ್ಡಿ, ವೆಂಕಟೇಶ ಬಿ., ನಾಗರಾಜ ಚಲ್ಲೂಳ್ಳಿ, ಬಸವರಾಜ ಮೂಲಿಮನಿ, ಲಕ್ಷ್ಮೀಕಾಂತ ನಾಲವಾರ, ಸೇರಿದಂತೆ ಸಮಾಜದ ಇತರೆ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್