ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಗೆ ಸಕಲ ಸಿದ್ಧತೆ
ಬೆಂಗಳೂರು, 08 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆ ನಾಳೆ ಮತದಾನದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತಾರಕಕ್ಕೇರಿವೆ. ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದು, ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ದಾವಣಗೆರೆ ದ
By election


ಬೆಂಗಳೂರು, 08 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆ ನಾಳೆ ಮತದಾನದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತಾರಕಕ್ಕೇರಿವೆ. ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದು, ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಜೋರಾಗಿದೆ. ನಗರದ ಡಿ ಆರ್ ಆರ್ ಶಾಲೆಯಲ್ಲಿ ಮಸ್ಟ್ರಿಂಗ್ ಕಾರ್ಯ ನಡೆಯುತ್ತಿದ್ದು, ಒಟ್ಟು 284 ಮತಗಟ್ಟೆಗಳಲ್ಲಿ 76 ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಕ್ಷೇತ್ರದಲ್ಲಿ 2,31,072 ಮತದಾರರಿದ್ದು, 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಜಿ.ಎಂ.ಗಂಗಾದಸ್ವಾಮಿ ತಿಳಿಸಿದ್ದಾರೆ.

ಮತ್ತೊಂದೆಡೆ ಬಾಗಲಕೋಟೆ ಕ್ಷೇತ್ರದಲ್ಲೂ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟ್ರಿಂಗ್ ಕಾರ್ಯ ನಡೆಯುತ್ತಿದ್ದು, ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ 2,59,797 ಮತದಾರರಿದ್ದು, ಇದರಲ್ಲಿ 1,26,999 ಪುರುಷರು ಹಾಗೂ 1,32,775 ಮಹಿಳಾ ಮತದಾರರು ಸೇರಿದ್ದಾರೆ. 4,387 ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.

ಪ್ರತಿ ಮತಗಟ್ಟೆಯಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, 59 ಮಾರ್ಗಗಳಿಗೆ 63 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪಿಂಕ್, ಯುವ, ವಿಕಲಚೇತನ ಹಾಗೂ ಥೀಮ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಒಟ್ಟಾರೆ, ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ರಾಜಕೀಯ ಪೈಪೋಟಿ ತೀವ್ರವಾಗಿದ್ದು, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲೇ ಮತದಾನ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande