
ಬೆಂಗಳೂರು, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಸ್ತಾವಿತ ಲೋಕ ಸಭಾ ಕ್ಷೇತ್ರಗಳ ವಿಂಗಡಣೆ ಪ್ರಕ್ರಿಯೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನು ಸ್ವಾಗತಿಸಿದರೂ, ದಕ್ಷಿಣ ರಾಜ್ಯಗಳ ಬಗ್ಗೆ ತೋರಲಾಗುತ್ತಿರುವ ಕಾಳಜಿ ರಾಜಕೀಯ ಉದ್ದೇಶಗಳಿಂದ ಪ್ರೇರಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಹೇಳಿಕೆಗಳು ಬಂದಿವೆ ಎಂದು ಹೇಳಿದ್ದಾರೆ.
ಲೋಕಸಭಾ ಸ್ಥಾನಗಳ ಹೆಚ್ಚಳ ಸಮಸ್ಯೆಯಲ್ಲ, ಆದರೆ ಅದರ ಹಂಚಿಕೆಯ ವಿಧಾನವೇ ಮುಖ್ಯ ಸಮಸ್ಯೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಸ್ತಾವಿತ ವಿಸ್ತರಣೆಯಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತಿದ್ದು, ದಕ್ಷಿಣ ರಾಜ್ಯಗಳಿಗೆ ಕಡಿಮೆ ಪ್ರಮಾಣದ ಹೆಚ್ಚಳ ದೊರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಹಲವು ಬಿಜೆಪಿ ಪ್ರಾಬಲ್ಯವಿರುವ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಇದರ ವಿರುದ್ಧವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕಡಿಮೆ ಪ್ರಮಾಣದ ಹೆಚ್ಚಳವನ್ನು ಮಾತ್ರ ಕಾಣಲಿವೆ ಎಂದು ಹೇಳಿದ್ದಾರೆ.
ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 816ಕ್ಕೆ ವಿಸ್ತರಿಸಿದ ಬಳಿಕವೂ ದಕ್ಷಿಣ ರಾಜ್ಯಗಳ ಪಾಲು ಶೇ.24ರಷ್ಟೇ ಉಳಿಯುತ್ತದೆ ಎಂಬುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜನಸಂಖ್ಯಾ ನಿಯಂತ್ರಣ ಮತ್ತು ಉತ್ತಮ ಆಡಳಿತದಲ್ಲಿ ಸಾಧನೆ ಮಾಡಿದ ರಾಜ್ಯಗಳಿಗೆ ಇದು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕ್ರಿಯೆಯಿಂದ ದೊಡ್ಡ ರಾಜ್ಯಗಳ ಸಂಖ್ಯಾತ್ಮಕ ಪ್ರಾಬಲ್ಯ ಹೆಚ್ಚಾಗಲಿದ್ದು, ಕರ್ನಾಟಕದಂತಹ ರಾಜ್ಯಗಳ ಧ್ವನಿ ಕುಗ್ಗುವ ಅಪಾಯವಿದೆ. “ಇದು ಸಹಕಾರಿ ಒಕ್ಕೂಟವಲ್ಲ, ಅಧಿಕಾರ ಕೇಂದ್ರೀಕರಣದ ಸ್ಪಷ್ಟ ಉದಾಹರಣೆ” ಎಂದು ಅವರು ಕಿಡಿಕಾರಿದ್ದಾರೆ.
ಸಾರ್ವಜನಿಕ ಚರ್ಚೆ ಮತ್ತು ರಾಜ್ಯಗಳ ಸಮಾಲೋಚನೆಯಿಲ್ಲದೆ ಇಂತಹ ಮಹತ್ವದ ರಚನಾತ್ಮಕ ಬದಲಾವಣೆಗಳನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದು, ನ್ಯಾಯ, ಪಾರದರ್ಶಕತೆ ಮತ್ತು ಒಕ್ಕೂಟಾತ್ಮಕ ತತ್ವಗಳನ್ನು ಕಾಪಾಡುವಂತೆ ಕೇಂದ್ರ ಸರ್ಕಾರಕ್ಕೆ ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುವ ಕೇಂದ್ರದ ಯಾವುದೇ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa