
ಬಾಗಲಕೋಟೆ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಿಗೆ ನಿಜವಾಗಿಯೂ ಇಷ್ಟವಾಗಿದ್ದರೆ ಸಿಎಂ ಐದು ದಿನಗಳ ಕಾಲ ಬಾಗಲಕೋಟೆಗೆ ಬಂದು ಪ್ರಚಾರ ಮಾಡುವ ಅಗತ್ಯವೇ ಇರಲಿಲ್ಲ. ಈ ಎರಡೂ ಚುನಾವಣಾ ಫಲಿತಾಂಶಕ್ಕಾಗಿ ಕಾಂಗ್ರೆಸ್ ನಾಯಕರು ವಿಧಾನಸೌಧವನ್ನು ಬಿಕೋ ಎನ್ನುವಂತೆ ಮಾಡಿ ಪ್ರಚಾರ ನಡೆಸುತ್ತಿದ್ದಾರೆ” ಎಂದು ಟೀಕಿಸಿದರು.
2018ರಲ್ಲಿ ಬದಾಮಿ ಕ್ಷೇತ್ರದಿಂದ ಸ್ವಲ್ಪ ಮತಗಳಿಂದ ಗೆದ್ದಿದ್ದ ಸಿದ್ದರಾಮಯ್ಯ ಅವರು ನಂತರ ಬಾದಾಮಿಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಸಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಲದ ವಿಷಯ ಪ್ರಸ್ತಾಪಿಸಿದ ಅವರು, ಗ್ಯಾರಂಟಿ ಯೋಜನೆಗಳಿಗಿಂತ ಸಾಲವೇ ಹೆಚ್ಚು ಮಾಡಲಾಗಿದೆ ಎಂದು ಹೇಳಿದರು. “ಖಜಾನೆ ತುಂಬಿಸುತ್ತೇನೆ ಎಂದು ಹೇಳಿ ಗ್ಯಾರಂಟಿಗಳಿಗೆ ಹಣ ನೀಡಲಾಗಿದೆ. ದೇಶದ ಇತಿಹಾಸದಲ್ಲೇ ಈ ರೀತಿಯ ಬಜೆಟ್ ಯಾರೂ ನೀಡಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಅವರ ಬಗ್ಗೆ ಮಾತನಾಡಿದ ಅವರು, ದೇವೇಗೌಡರ ದುರ್ಬಲತೆಯನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ ಲಾಭ ಪಡೆದಿದೆ. 2006ರಲ್ಲಿ ದೇವೇಗೌಡರು ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ಕಾಂಗ್ರೆಸ್ ಇಷ್ಟೊಂದು ಬಲವಾಗುತ್ತಿರಲಿಲ್ಲ ಎಂದು ಹೇಳಿದರು.
ಇದಲ್ಲದೆ “ನಾನು ಹಿಂದುಳಿದ ನಾಯಕ ಎಂದು ಸಿಎಂ ಹೇಳುತ್ತಿದ್ದಾರೆ. ಅವರನ್ನು ಬೆಳೆಸಲು ಯಾರ ಶ್ರಮ ಇದೆ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. 2013ರಲ್ಲಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದವರು ಈಗ ಕೊನೆಯುಸಿರು ಇರುವವರೆಗೆ ರಾಜಕೀಯ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande