
ಗದಗ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶ ಸೇವೆಯಲ್ಲಿ 22 ವರ್ಷಗಳ ಕಾಲ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಮುಸ್ಲಿಂ ಸಮಾಜದಿಂದ ಆತ್ಮೀಯ ಸನ್ಮಾನ ನೀಡಲಾದ ಘಟನೆ ಗದಗ ಜಿಲ್ಲೆಯ ಸೊರಟೂರ ಗ್ರಾಮದಲ್ಲಿ ನಡೆಯಿತು.
ಸೊರಟೂರ ಗ್ರಾಮದ ಯೋಧ ಜಗದೀಶ ಮಳ್ಳಿ ಅವರು ದೀರ್ಘ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಸಮಾಜದ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಯೋಧನಿಗೆ ಶಾಲು ಹೊದಿಸಿ, ಫಲಪೂಷ್ಪ ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೈಬುಸಾಬ ಯಕ್ಲಾಸಪೂರ ಅವರು, ಸೈನಿಕರು ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರಾಗಿದ್ದಾರೆ. ಹಗಲು-ರಾತ್ರಿ ಎನ್ನದೇ ಗಡಿಭಾಗದಲ್ಲಿ ಸೇವೆ ಸಲ್ಲಿಸುವ ಯೋಧರನ್ನು ಸದಾ ಗೌರವದಿಂದ ಕಾಣಬೇಕು ಎಂದು ಹೇಳಿದರು.
ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಸೇವೆ ಸಲ್ಲಿಸುವ ಸೈನಿಕರು ಸಮಾಜಕ್ಕೆ ಮಾದರಿಯಾಗಿದ್ದು, ಅವರ ಸೇವೆ ಅಪಾರವಾಗಿದೆ. ಇಂತಹ ಯೋಧರನ್ನು ಗುರುತಿಸಿ ಸನ್ಮಾನಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿರಾಜ್ ಯಳವತ್ತಿ, ಪಕ್ರುಸಾಬ ಬಾಬುಖಾನವರ, ಪೀರಸಾಬ ಶರೀಫ್ಸಾಬ ಹಣಗಿ, ಬಾಬುಖಾನವರ, ಮೈಬೂಬಸಾಬ ಶಿರಹಟ್ಟಿ, ದಾವಲಸಾಬ ಸಂಶಿ, ಎಂ.ಎ. ಯರಗುಡಿ, ಪೀರಸಾಬ ಡಂಬಳ, ಬಾಬುಸಾಬ ಖರ್ನಾಚಿ, ಮಾಬುಸಾಬ ಬಡಿಗೇರ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಧರ್ಮಭೇದವನ್ನು ಮೀರಿ ಯೋಧನ ಸೇವೆಗೆ ಗೌರವ ಸಲ್ಲಿಸಿದ ಈ ಕಾರ್ಯಕ್ರಮ ಗ್ರಾಮದಲ್ಲಿ ಸಾಮರಸ್ಯದ ಸಂಕೇತವಾಗಿ ಮೂಡಿಬಂದಿತು.
ಹಿಂದೂಸ್ತಾನ್ ಸಮಾಚಾರ್ / lalita MP