
ಬೆಂಗಳೂರು, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ದುರಂತ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು,
“ನಿನ್ನೆ ರಾತ್ರಿ ಸಂಭವಿಸಿದ ಗೋಡೆ ಕುಸಿತ ಪ್ರಕರಣ ಬೆಂಗಳೂರಿನ ಅವ್ಯವಸ್ಥೆಯ ಸ್ಪಷ್ಟ ಉದಾಹರಣೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು,” ಎಂದು ಅಶೋಕ ಹೇಳಿದ್ದಾರೆ. ಈ ದುರಂತದಲ್ಲಿ ಓರ್ವ ಬಾಲಕಿ ಸೇರಿದಂತೆ ಏಳು ಮಂದಿ ಜೀವ ಕಳೆದುಕೊಂಡಿರುವುದು ನಗರ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ ಎಂದರು.
ನಗರದ ಮೂಲಸೌಕರ್ಯಗಳ ಹದಗೆಟ್ಟ ಸ್ಥಿತಿಯನ್ನು ತೀವ್ರವಾಗಿ ಟೀಕಿಸಿದ ಅವರು, “ರಸ್ತೆ ಗುಂಡಿಗಳು, ನೇತಾಡುವ ವಿದ್ಯುತ್ ತಂತಿಗಳು, ಶಿಥಿಲಗೊಂಡ ಕಟ್ಟಡಗಳು—ಇವೆಲ್ಲವೂ ನಾಗರಿಕರ ಜೀವಕ್ಕೆ ಅಪಾಯಕಾರಿಯಾಗಿದೆ. ದೇಶದ ಆರ್ಥಿಕ ಬೆನ್ನೆಲುಬಾದ ಬೆಂಗಳೂರಿನಲ್ಲಿ ಇಂತಹ ದುಸ್ಥಿತಿ ನಾಚಿಕೆಗೇಡಿತನ,” ಎಂದು ಆರೋಪಿಸಿದರು.
ಮಳೆ ಕಾರಣವನ್ನು ಸಮರ್ಥನೆಗೆ ಬಳಸುವವರ ವಿರುದ್ಧವೂ ಕಿಡಿಕಾರಿರುವ ಅವರು, ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಸಾಮಾನ್ಯ. ಇದನ್ನು ಪ್ರಕೃತಿ ವಿಕೋಪ ಎಂದು ಹೇಳುವುದು ಮೃತರ ಕುಟುಂಬಗಳಿಗೆ ನ್ಯಾಯವಲ್ಲ,” ಎಂದು ಹೇಳಿದರು.
ಮುಂಗಾರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ನೇರ ಆರೋಪ ಮಾಡಿದ್ದು. “ಮಳೆಗಾಲದ ನಿರ್ವಹಣೆ ಕುರಿತು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ. ರಸ್ತೆ ದುರಸ್ತಿ, ರಾಜಕಾಲುವೆಗಳ ಸ್ವಚ್ಛತೆ, ಅಪಾಯಕಾರಿ ಕಟ್ಟಡಗಳ ಪತ್ತೆ—ಯಾವುದಕ್ಕೂ ಗಮನ ನೀಡಿಲ್ಲ,” ಎಂದು ದೂರಿದ್ದಾರೆ.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಮೂಲಸೌಕರ್ಯ ಸುಧಾರಣೆಗೆ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿರುವ ಅಶೋಕ, “ಈ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಆಗುವ ಪ್ರತಿಯೊಂದು ಅನಾಹುತಕ್ಕೂ ಸರ್ಕಾರವೇ ಹೊಣೆ,” ಎಂದು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa