
ನವದೆಹಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ನಡೆಯಲಿರುವ 2026ರ ವಿಧಾನ ಸಭಾ ಚುನಾವಣೆಗಳು ಹಾಗೂ ಉಪಚುನಾವಣೆಗಳ ಹಿನ್ನೆಲೆ, ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಮತದಾನದ ದಿನದಂದು ಎಲ್ಲಾ ವರ್ಗದ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವುದು ಕಡ್ಡಾಯ ಎಂದು ಆಯೋಗ ಶುಕ್ರವಾರ ಸ್ಪಷ್ಟಪಡಿಸಿದೆ.
ಈ ಸೌಲಭ್ಯವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಜೊತೆಗೆ ದಿನಗೂಲಿ ಮತ್ತು ಸಾಂದರ್ಭಿಕ ಕಾರ್ಮಿಕರಿಗೂ ಅನ್ವಯವಾಗುತ್ತದೆ. ಮತದಾನದ ದಿನಕ್ಕೆ ಯಾವುದೇ ರೀತಿಯ ವೇತನ ಕಡಿತ ಮಾಡಬಾರದು ಎಂದು ಆಯೋಗ ತಿಳಿಸಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಅಸ್ಸಾಂ, ಕೇರಳ, ಪುದುಚೇರಿ, ಗೋವಾ, ಕರ್ನಾಟಕ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಏಪ್ರಿಲ್ 23ರಂದು ಮತ್ತು ಎರಡನೇ ಹಂತ ಏಪ್ರಿಲ್ 29ರಂದು ನಡೆಯಲಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1951 ರ ಸೆಕ್ಷನ್ 135B ಪ್ರಕಾರ, ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮತದಾರನಿಗೂ ಮತದಾನದ ದಿನ ವೇತನ ಸಹಿತ ರಜೆ ಪಡೆಯುವ ಹಕ್ಕು ಇದೆ. ಈ ನಿಯಮವನ್ನು ಉಲ್ಲಂಘಿಸುವ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿದೆ.
ತಮ್ಮ ಮತಕ್ಷೇತ್ರದ ಹೊರಗೆ ಉದ್ಯೋಗದಲ್ಲಿರುವ ಮತದಾರರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ. ಇದರಿಂದ ಅವರು ತಮ್ಮ ಮತದಾನದ ಹಕ್ಕನ್ನು ಯಾವುದೇ ಅಡೆತಡೆಯಿಲ್ಲದೆ ಚಲಾಯಿಸಲು ಸಾಧ್ಯವಾಗುತ್ತದೆ ಎಂದು ಆಯೋಗ ತಿಳಿಸಿದೆ.
ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಮತ್ತು ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa