ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸುಕುಧಾರಿ ಕಳ್ಳರ ಹಾವಳಿ
ಗದಗ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು, ಕಳೆದ ಒಂದು ವಾರದಿಂದ ನಿರಂತರ ಕಳ್ಳತನ ಹಾಗೂ ಕಳ್ಳತನ ಯತ್ನಗಳ ಮೂಲಕ ಜನರಲ್ಲಿ ಭೀತಿ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಸಮಯದಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು, ಕೈಯಲ್ಲಿ
ಫೋಟೋ


ಗದಗ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು, ಕಳೆದ ಒಂದು ವಾರದಿಂದ ನಿರಂತರ ಕಳ್ಳತನ ಹಾಗೂ ಕಳ್ಳತನ ಯತ್ನಗಳ ಮೂಲಕ ಜನರಲ್ಲಿ ಭೀತಿ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಸಮಯದಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವ ಐದು ಜನರ ಗ್ಯಾಂಗ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆವಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗದಗ ನಗರದ ಕೇಶವ ಪಾರ್ಕ್ ಬಡಾವಣೆ ಹಾಗೂ ಪುಟ್ಟರಾಜ ನಗರ ಪ್ರದೇಶಗಳು ಕಳ್ಳರ ಟಾರ್ಗೆಟ್ ಆಗಿದ್ದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಿಶೇಷವಾಗಿ ಪುಟ್ಟರಾಜ ಬಡಾವಣೆಯ ನಿವಾಸಿಯಾದ ಶಿಕ್ಷಕಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಪ್ರಕರಣ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ವಿಜಯಲಕ್ಷ್ಮಿ ಅವರು ತಮ್ಮ ಕುಟುಂಬದವರೊಂದಿಗೆ ಸಂಬಂಧಿಕರ ಮನೆಯಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಅಲ್ಲೇ ತಂಗಿ, ಮುಂಜಾನೆ ಮನೆಗೆ ಮರಳಿದಾಗ ಮನೆಯ ಮುಂದಿನ ಬಾಗಿಲಿನ ಲಾಕ್ ಮುರಿದಿರುವುದು ಗಮನಕ್ಕೆ ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು 70 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನಕ್ಕೊಳಗಾದ ಮನೆಯವರ ಸಂಬಂಧಿ ಪ್ರಕಾಶ ಬಂಡಿ ಅವರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಳ್ಳರ ಧೈರ್ಯಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ಒಂದು ವಾರದಿಂದ ಇದೇ ರೀತಿಯ ಘಟನೆಗಳು ಕೇಶವ ಪಾರ್ಕ್ ಹಾಗೂ ಪುಟ್ಟರಾಜ ಬಡಾವಣೆಯಲ್ಲಿ ಪುನರಾವರ್ತನೆಯಾಗುತ್ತಿದ್ದು, ಹಲವು ಮನೆಗಳಲ್ಲಿ ಕಳ್ಳತನ ಯತ್ನಗಳು ನಡೆದಿವೆ. ಮುಸುಕುದಾರಿ ಕಳ್ಳರು ರಾತ್ರಿ ವೇಳೆ ಸ್ವಚ್ಛಂದವಾಗಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದರಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಸ್ಥಳೀಯ ನಿವಾಸಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಳ್ಳರ ಹಾವಳಿ ಬಗ್ಗೆ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಮನೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದು, ಅನೇಕರು ಈಗಾಗಲೇ ಸಿಸಿಟಿವಿ ಅಳವಡಿಕೆ ಮಾಡುತ್ತಿದ್ದಾರೆ. ಆದರೆ, ಇದ್ರಲ್ಲಿಯೂ ಕಳ್ಳರ ಚಟುವಟಿಕೆಗಳು ಕಡಿಮೆಯಾಗದೇ ಇರುವುದರಿಂದ ಜನರಲ್ಲಿ ಆತಂಕ ಮುಂದುವರಿದಿದೆ.

ಸ್ಥಳೀಯ ನಿವಾಸಿ ಪ್ರಭು ಬಳ್ಳಾರಿ ಅವರು ಮಾತನಾಡಿ, “ರಾತ್ರಿ ಆದ್ರೆ ಸಾಕು, ಭಯದಲ್ಲಿ ಬದುಕು ಸಾಗಿಸುವಂತಾಗಿದೆ. ಕಳ್ಳರು ಯಾವ ಕ್ಷಣದಲ್ಲಾದರೂ ಏನಾದರೂ ಮಾಡಬಹುದು ಅನ್ನೋ ಭೀತಿ ಇದೆ” ಎಂದು ಹೇಳಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ನಿರ್ಭಯವಾಗಿ ಸಂಚರಿಸುತ್ತಿರುವ ಈ ಗ್ಯಾಂಗ್ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡರೆ ಮಾತ್ರ ಅವಳಿ ನಗರದ ಜನರಿಗೆ ನೆಮ್ಮದಿ ಸಿಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande