
ಕೊಪ್ಪಳ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತಾಲೂಕು ಚುಟುಕು ಸಾಹಿತ್ಯ ಪರಿಷತ್, ಬಸವಶ್ರೀ ಸೇವಾ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಸಹಯೋಗದಲ್ಲಿ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ವಚನ ಕಾತಿ೯ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಆಚರಿಸಲಾಯಿತು.
ಬಸವಶ್ರೀ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶಿವಶರಣೆ, ಬಸವಶ್ರೀ ಸೋಮನಾಳ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅಕ್ಕ ಮಹಾದೇವಿಯ ವಚನಗಳು ಮನುಕುಲಕ್ಕೆ ಶ್ರೇಷ್ಟವಾಗಿವೆ ಪ್ರತಿಯೊಬ್ಬರೂ ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಉಪನ್ಯಾಸಕ ಹಾಗೂ ಸಾಹಿತಿ ಶಿವಪ್ರಸಾದ್ ಹಾದಿಮನಿ ಅವರು ಮಾತನಾಡಿ, ಅಕ್ಕ ಮಹಾದೇವಿ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಸುಜ್ಞಾನಿ, ಮತ್ತು ನಿರ್ಮಲ, ದಂಪತಿಗಳ ಮಗಳಾಗಿ ಜನಿಸಿದರು, ಯೌವನದಲ್ಲಿ, ತನ್ನ ಒಪ್ಪಿಗೆ ಇಲ್ಲದಿದ್ದರೂ, ತಂದೆ ತಾಯಿಯರಿಗೆ ಗೌರವ ಕೊಡುವ ಕಾರಣಕ್ಕೆ, ಮದುವೆ ಎಂಬ ಬಂಧನದಲ್ಲಿ ಸಿಲುಕಿ, ಕೌಶಿಕ ಮಹಾರಾಜನೊಡನೆ ವಿವಾಹವಾದರೂ ಕೆಲವು ಶರತ್ತುಗಳನ್ನು ಕೌಶಿಕ ಉಲ್ಲಂಘಿಸಿದ್ದಕ್ಕಾಗಿ, ಅರಮನೆಯ ವೈಭವವನ್ನು, ತೊರೆದು, ಚೆನ್ನಮಲ್ಲಕಾರ್ಜುನನೇ ತನ್ನ ಪತಿ ಎಂದು ಅವನನ್ನು ಹುಡುಕುತ್ತ ನಡೆದು, ಸಾಧನೆಯ ಶಿಖರವೇರಿದ, ಅನ್ಯಾಯ ದ ವಿರುದ್ಧ ಧ್ವನಿ ಎತ್ತಿ, ಸಮಾಜದ ಏಳಿಗೆಗೆ ಕಾರಣಳಾಗಿ, ವಚನಕಾರ್ತಿಯಾಗಿ ಹೊರಹೊಮ್ಮಿದ ಪ್ರತಿಭಾನ್ವಿತ
ಮಹಿಳೆ, ಅಕ್ಕಮಹಾದೇವಿ ಅವರು ಎಂದು ಗುಣಗಾನ ಮಾಡಿದರು.
ತಾಲೂಕಾ ಚುಸಾಪ ಅಧ್ಯಕ್ಷ, ಮೈಲಾರಪ್ಪ ಉಂಕಿ, ಅವರು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ, ಅಕ್ಕಮಹಾದೇವಿಯವರ ಪಾತ್ರ ಬಹಳ ದೊಡ್ಡದು ಎಂದರು.
ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ ನೆಲಾಗಣಿಯವರು ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ, ಅಂಜಿದೊಡೆಂತಯ್ಯ,ಎಂಬ ಅಕ್ಕ ಮಹಾದೇವಿಯ ಪ್ರಸಿದ್ಧ ವಚನವನ್ನು ಪ್ರಸ್ತಾಪಿಸಿ ಮಾತಾಡಿದರು.
ಸಾಹಿತಿ , ನಿವೃತ್ತ ಶಿಕ್ಷಕ ಶಿವಪ್ಪ ಕೊಗಳಿ ಅವರು, ಮಾತನಾಡಿ ಜಯಂತಿಗೆ ಶುಭ ಹಾರೈಸಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್