
ನವದೆಹಲಿ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿರುವ ಹಿನ್ನೆಲೆ, ಸಾಮರಸ್ಯ ಮತ್ತು ಸೌಹಾರ್ದತೆಗಾಗಿ ಮತ ಚಲಾಯಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾರರಿಗೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಅವರು, “ಪ್ರತಿಯೊಬ್ಬ ಮತದಾರರೂ ಭಯ ಅಥವಾ ಹಿಂಜರಿಕೆಯಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಧೈರ್ಯವಾಗಿ ಚಲಾಯಿಸಿ,” ಎಂದು ಕರೆ ನೀಡಿದ್ದಾರೆ.
ಯಾರಿಂದಲೂ ಪ್ರಭಾವಿತರಾಗಬೇಡಿ ಅಥವಾ ಬೆದರಿಕೆಗೆ ಒಳಗಾಗಬೇಡಿ ಎಂದು ಒತ್ತಾಯಿಸಿದ ಖರ್ಗೆ, ಪ್ರಗತಿಪರ ಮೌಲ್ಯಗಳು, ಅಭಿವೃದ್ಧಿ, ಸಾಮರಸ್ಯ ಮತ್ತು ಸೌಹಾರ್ದತೆಗಾಗಿ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳವು ಸದಾ ಅರ್ಥಪೂರ್ಣ ಬದಲಾವಣೆಗಳಿಗೆ ನಾಂದಿ ಹಾಡಿದ ರಾಜ್ಯವಾಗಿದ್ದು, ಇಂದಿನ ಮತದಾನವೂ ಅಂತಹ ಮಹತ್ವದ ಕ್ಷಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ನಿಮ್ಮ ಹಕ್ಕುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಶಕ್ತಿಗಳಿಗೆ ಸೂಕ್ತ ಉತ್ತರ ನೀಡುವ ಸಮಯ ಇದು,” ಎಂದು ಹೇಳಿದ್ದಾರೆ.
ವಿಶೇಷವಾಗಿ ಯುವಜನರು ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಖರ್ಗೆ ಕರೆ ನೀಡಿದ್ದು, ರಾಜ್ಯದಲ್ಲಿ ನಿಜವಾದ ಪ್ರಜಾಪ್ರಭುತ್ವದ ಮನೋಭಾವ ಮುಂದುವರಿಯುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa