
ಬೆಂಗಳೂರು, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆ ಬಿ. ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ “ಐತಿಹಾಸಿಕ ಮೋಸ” ಮಾಡಿದ್ದು, ಒಳಮೀಸಲಾತಿ ಜಾರಿಯಲ್ಲಿ ವಿಳಂಬ ಮಾಡಿ ಕೊನೆಗೆ ಸಮುದಾಯಗಳ ನಡುವೆ ಅನ್ಯಾಯಕರ ಹಂಚಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಿತ್ತು. ಆದರೆ ಪ್ರಸ್ತುತ ಸರ್ಕಾರ ಸಚಿವ ಸಂಪುಟದಲ್ಲಿ ‘ಎ’, ‘ಬಿ’, ‘ಸಿ’ ವರ್ಗಗಳಾಗಿ ವಿಂಗಡಿಸಿ, ‘ಎ’ ವರ್ಗದ ಮೀಸಲಾತಿಯನ್ನು ಶೇ.6ರಿಂದ 5.25ಕ್ಕೆ ಮತ್ತು ‘ಬಿ’ ವರ್ಗದ ಪ್ರಮಾಣವನ್ನು ಶೇ.5.5ರಿಂದ 5.25ಕ್ಕೆ ಇಳಿಸಿದೆ ಎಂದು ವಿಜಯೇಂದ್ರ ದೂರಿದ್ದಾರೆ.
ಇದಲ್ಲದೆ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ನೀಡಲಾಗಿದ್ದ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಿ ‘ಸಿ’ ವರ್ಗಕ್ಕೆ ಶೇ.4.5 ಮಾತ್ರ ನೀಡಲಾಗಿದೆ. ಅಲೆಮಾರಿ ಸಮುದಾಯಗಳಿಗೂ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರವೇ ಸಲ್ಲಿಸಿದ ಅಫಿಡವಿಟ್ನ ಪರಿಣಾಮವಾಗಿ ಒಟ್ಟು ಮೀಸಲಾತಿ ಪ್ರಮಾಣವು ಶೇ.17ರಿಂದ ಶೇ.15ಕ್ಕೆ ಇಳಿಯಲು ಕಾರಣವಾಗಿದೆ ಎಂದಿದ್ದಾರೆ.
ಇದರ ಜೊತೆಗೆ, ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಪ್ರಕ್ರಿಯೆ ಆರಂಭಿಸದೇ, ಒಳಮೀಸಲಾತಿ ಹೆಸರಿನಲ್ಲಿ ಸಮಯ ವ್ಯರ್ಥ ಮಾಡಲಾಗಿದೆ. ಈಗ ಅಧಿಕಾರಾವಧಿ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ನೇಮಕಾತಿ ಘೋಷಣೆ ಮಾಡುವುದು ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಇನ್ನೂ, ಕಾಂಗ್ರೆಸ್ ಹಿರಿಯ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ಉಲ್ಲೇಖಿಸಿ, ಪರಿಶಿಷ್ಟ ಸಮುದಾಯಗಳಿಗೆ ಮಾಡಿದ ಅನ್ಯಾಯಕ್ಕೆ ಭವಿಷ್ಯದಲ್ಲಿ ರಾಜಕೀಯ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶೇ.17ರ ಮೀಸಲಾತಿಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಬೇಕು. ಇಲ್ಲವಾದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷ ತಕ್ಕ ಬೆಲೆ ತೆರಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa