



ಬಳ್ಳಾರಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಡಾ. ರಾಜ್ಕುಮಾರ್ ಅವರು ಕೇವಲ ಒಬ್ಬ ನಟರಾಗಿರದೆ, ಸಂತನಂತೆ ಬದುಕಿದ ಮಹಾನ್ ಚೇತನ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಜ್ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್ ಕುಮಾರ್ ಅವರಿಗೆ ಹಣ, ಅಧಿಕಾರ, ಯೌವನ ಮತ್ತು ರೂಪದಂತಹ ಎಲ್ಲ 'ಮದ'ಗಳು ಲಭ್ಯವಿದ್ದರೂ, ಅವುಗಳನ್ನು ಧಿಕ್ಕರಿಸಿ ವಿನಯವಂತಿಕೆಯಿಂದ ಬದುಕಿದವರು. ಅವರ ವ್ಯಕ್ತಿತ್ವವು ಎಲ್ಲ ಕಾಲಕ್ಕೂ ಎಲ್ಲ ಕಲಾವಿದರಿಗೂ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಸಮಾಜದಲ್ಲಿ ಇಂದು ಜಾತಿ ರಾಜಕಾರಣ ಮತ್ತು ಪ್ರತಿಯೊಂದು ಸಾಧನೆಯ ಹಿಂದೆ ಜಾತಿಯನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಡಾ. ರಾಜ್ಕುಮಾರ್ ಅವರು ಜಾತಿಯನ್ನು ಮೀರಿ ಬೆಳೆದ 'ಜಾತ್ಯತೀತ ಜ್ಯೋತಿ'ಯಾಗಿದ್ದರು. ಅಧಿಕಾರದ ಆಸೆಗಾಗಿ ಅವರು ಎಂದೂ ರಾಜಕೀಯಕ್ಕೆ ಬರಲಿಲ್ಲ, ಬದಲಾಗಿ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿ ಉಳಿದರು ಎಂದು ಸ್ಮರಿಸಿದರು.
ರಾಜ್‌ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ನಾಡಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟವರು. 'ಬಂಗಾರದ ಮನುಷ್ಯ' ಚಿತ್ರದ ಮೂಲಕ ಕೃಷಿಯ ಮಹತ್ವವನ್ನು ಸಾರಿದ್ದರಿಂದ ಅನೇಕ ಯುವಕರು ಕೃಷಿಯತ್ತ ಆಕರ್ಷಿತರಾಗಿದ್ದರು. ಅವರು ಸಿನಿಮಾದಲ್ಲಿ ತೋರಿದ ಆದರ್ಶಗಳನ್ನು ತಮ್ಮ ನಿಜ ಜೀವನದಲ್ಲೂ ಪಾಲಿಸಿಕೊಂಡು ಬಂದವರು ಎಂದು ತಿಳಿಸಿದರು.
ಭಕ್ತ ಕುಂಬಾರ, ಭಕ್ತ ಕನಕದಾಸ, ಸಂತ ತುಕಾರಾಂ, ಬೇಡರ ಕಣ್ಣಪ್ಪ ಮತ್ತು ರಾಘವೇಂದ್ರ ಸ್ವಾಮಿಗಳ ಪಾತ್ರಗಳಲ್ಲಿ ನಟಿಸುವ ಮೂಲಕ ಆ ವ್ಯಕ್ತಿತ್ವಗಳ ಬಗ್ಗೆ ಸಾಮಾನ್ಯ ಜನರಿಗೂ ತಿಳಿಯುವಂತೆ ಮಾಡಿದರು. ಅವರ ಸರಳ ಸಜ್ಜನಿಕೆಯೇ ಅವರಿಗೆ ಇಂದಿಗೂ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ ಎಂದರು.
ಬಳ್ಳಾರಿಯ ಆಕಾಶವಾಣಿ ಎಫ್ಎಂ ಕೇಂದ್ರದ ಉದ್ಘೋಷಕರಾದ ಬಸವರಾಜ ಅಮಾತಿ ಅವರು ವಿಶೇಷ ಉಪನ್ಯಾಸ ನೀಡಿ, ಡಾ. ರಾಜ್ಕುಮಾರ್ ಅವರು ಏಪ್ರಿಲ್ 24, 1929 ರಂದು ಜನಿಸಿದರು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಪ್ರತಿಮ ರಂಗಭೂಮಿ ಕಲಾವಿದರಾಗಿದ್ದರು. ರಾಜ್ ಕುಮಾರ್ 'ಬೇಡರ ಕಣ್ಣಪ್ಪ' (1954) ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಆರಂಭವಾದ ಅವರ ಸಿನಿ ಪಯಣ ಸುಮಾರು 200 ರಿಂದ 205 ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿಯೊಂದಿಗೆ ಸಂಬಂಧ :
ಡಾ. ರಾಜ್ ಅವರು ಕೇವಲ ನಟರಾಗಿರದೆ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು. 1995 ರಲ್ಲಿ ಬಳ್ಳಾರಿಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿ, ಅದರಿಂದ ಬಂದ ಹಣವನ್ನು ರಂಗಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು. ಸರ್ಕಾರ ಪ್ರಶಸ್ತಿ ಘೋಷಿಸಿದಾಗ, ತಮಗಿಂತ ಮೊದಲು ಕುವೆಂಪು ಅವರಿಗೆ ಈ ಗೌರವ ಸಿಗಬೇಕು ಎಂದು ಅವರು ಬಯಸಿದ್ದರು. ನಂತರ ಇಬ್ಬರಿಗೂ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೊಂದಿಗೆ ಬಂದ ಹಣವನ್ನೆಲ್ಲಾ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಯಾಗಿ ನೀಡಿದರು ಎಂದರು.
ಡಾ.ರಾಜ್ ಕುಮಾರ್ ಅವರು ಸಹಕಲಾವಿದರಿಗೆ ಗೌರವ ನೀಡುತ್ತಿದ್ದರು. ಚಿತ್ರೀಕರಣದ ಸೆಟ್ ಅನ್ನು ದೇವಸ್ಥಾನವೆಂದು ಭಾವಿಸುತ್ತಿದ್ದ ಅವರು, ಅಲ್ಲಿ ಧೂಮಪಾನ ಅಥವಾ ಮದ್ಯಪಾನಕ್ಕೆ ಅವಕಾಶ ನೀಡುತ್ತಿರಲಿಲ್ಲ. ಸ್ವತಃ ಅವರೂ ಕೂಡ ತೆರೆಯ ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸಲು ನಿರಾಕರಿಸುತ್ತಿದ್ದರು ಎಂದರು.
ಅಭಿಮಾನಿಗಳೇ ದೇವರು :
ತಿರುಪತಿಯಲ್ಲಿ ಸಾಮಾನ್ಯ ಸರತಿಯಲ್ಲಿ ನಿಂತು ದರ್ಶನ ಪಡೆದ ಘಟನೆಯ ನಂತರ, ಅವರು ತಮ್ಮ ಅಭಿಮಾನಿಗಳನ್ನು 'ಅಭಿಮಾನಿ ದೇವರುಗಳು' ಎಂದು ಕರೆಯಲು ಆರಂಭಿಸಿದರು. ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡ ಭಾಷೆಯ ಹಿತಾಸಕ್ತಿಗಾಗಿ ಶ್ರಮಿಸಿದರು. 'ಸಂಪತ್ತಿಗೆ ಸವಾಲ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕರಾದ ಅವರು, ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳಿಗೂ ಧ್ವನಿಯಾದರು. ಅವರ 'ನಾದಮಯ' ಹಾಡು ಇಂದಿಗೂ ಜನಪ್ರಿಯವಾಗಿದೆ. ವಿಶೇಷವೆಂದರೆ, ಭಕ್ತಿಗೀತೆಗಳ ಗಾಯನದಿಂದ ಬಂದ ಹಣವನ್ನು ಅವರು ಎಂದಿಗೂ ಸ್ವಂತಕ್ಕೆ ಬಳಸದೆ ಮಠ-ಮಾನ್ಯಗಳಿಗೆ ನೀಡುತ್ತಿದ್ದರು ಎಂದು ತಿಳಿಸಿದರು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಡಾ. ರಾಜ್ಕುಮಾರ್ ಅವರು ನೀಡಿದ ಕೊಡುಗೆ ಅನನ್ಯ. ಅವರ ಸರಳತೆ ಮತ್ತು ಆದರ್ಶಗಳು ಇಂದಿನ ತಲೆಮಾರಿಗೆ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಕ್ಷಿತಿ ಮ್ಯೂಸಿಕಲ್ ಈವೆಂಟ್ಸ್ ನ ತಂಡದವರು ಡಾ.ರಾಜ್ ಕುಮಾರ್ ನಟಿಸಿದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ರಸದೌತಣವನ್ನು ಕಲಾಭಿಮಾನಿಗಳಿಗೆ ಉಣಬಡಿಸಿದರು. ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕನ್ನಡಪರ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಡಾ.ರಾಜ್ ಕುಮಾರ್ ಕಲಾಭಿಮಾನಿಗಳು, ಸಾರ್ವಜನಿಕರು, ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್