
ಬೆಂಗಳೂರು, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೇಸಿಗೆ ತೀವ್ರಗೊಂಡಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಖಾಸಗಿ ನೀರಿನ ಟ್ಯಾಂಕರ್ಗಳ ಅತಿರೇಕ ದರಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಜಲಮಂಡಳಿಯ ವತಿಯಿಂದ ‘ಕಾವೇರಿ ಆನ್ ವೀಲ್ಸ್’ ಸೇವೆ ಆರಂಭವಾಗಿದ್ದು, ಈಗ ನಾಗರಿಕರಿಗೆ ಮನೆ ಬಾಗಿಲಿಗೇ ಕಾವೇರಿ ನೀರು ಪೂರೈಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯನ್ನು ಮನಗಂಡು, ಖಾಸಗಿ ಟ್ಯಾಂಕರ್ ಮಾಫಿಯಾದ ಅಕ್ರಮ ಚಟುವಟಿಕೆಗಳಿಗೆ ತಡೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
‘Kaveri on Wheels’ ಮೊಬೈಲ್ ಆ್ಯಪ್ ಮೂಲಕ ನಾಗರಿಕರು ಸುಲಭವಾಗಿ ನೀರನ್ನು ಬುಕ್ ಮಾಡಬಹುದಾಗಿದ್ದು, ನಿಗದಿತ ಮತ್ತು ಸಮಂಜಸ ದರದಲ್ಲಿ ಪೂರೈಕೆ ನಡೆಯಲಿದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದಲ್ಲದೆ, ನೀರಿನ ಲಭ್ಯತೆ ಪಾರದರ್ಶಕವಾಗಲಿದೆ.
ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಈ ಸೇವೆ ಜಾರಿಯಾಗಿದ್ದು, ಬೇಡಿಕೆಯ ಮೇರೆಗೆ ನೀರನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಖಾಸಗಿ ಟ್ಯಾಂಕರ್ಗಳ ಅವಲಂಬನೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa