ಐಪಿಎಲ್ ; ಆರ್.ಸಿ.ಬಿ–ಗುಜರಾತ ಪಂದ್ಯಕ್ಕೆ ಚಿನ್ನಸ್ವಾಮಿ ಸಜ್ಜು, 2,300 ಪೊಲೀಸರ ಬಿಗಿ ಬಂದೋಬಸ್ತ್
ಋತುವಿನಲ್ಲಿ
IPL


ಬೆಂಗಳೂರು, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಐಪಿಎಲ್ ಹಬ್ಬದ ಸಂಭ್ರಮದ ನಡುವೆ ನಗರ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ವಿಶೇಷ ದಿನವಾಗಿದ್ದು, ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಆರ್‌.ಸಿ.ಬಿ ಮತ್ತು ಜಿಟಿ ನಡುವಿನ ಪಂದ್ಯಕ್ಕೆ ಭಾರಿ ಕುತೂಹಲ ವ್ಯಕ್ತವಾಗಿದೆ.

ಈ ಋತುವಿನಲ್ಲಿ ಆರ್‌.ಸಿ.ಬಿ ತವರು ಮೈದಾನದಲ್ಲಿ ಆಡಲಿರುವ ಕೊನೆಯ ಲೀಗ್ ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಹರಿದುಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ನಗರ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಸುಮಾರು 2,300 ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಡಿಸಿಪಿ, ಎಸಿಪಿ ಹಾಗೂ ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಕ್ರೀಡಾಂಗಣದ ಒಳ ಹಾಗೂ ಹೊರ ವಲಯಗಳಲ್ಲಿ ತಪಾಸಣೆ, ಜನಸಂದಣಿ ನಿಯಂತ್ರಣ ಸೇರಿದಂತೆ ವಿವಿಧ ವ್ಯವಸ್ಥೆಗಳು ಕಲ್ಪಿಸಲಾಗಿದೆ.

ಸಂಚಾರ ದಟ್ಟಣೆ ತಪ್ಪಿಸಲು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ‘ನೋ ಪಾರ್ಕಿಂಗ್’ ನಿಯಮ ಜಾರಿಗೊಳಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ, ಕಳೆದ ಪಂದ್ಯಗಳಲ್ಲಿ ಟಿಕೆಟ್ ಕಾಳಸಂತೆ ಮಾರಾಟ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಸಿಸಿಬಿ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಅಕ್ರಮ ಟಿಕೆಟ್ ಮಾರಾಟಗಾರರ ಮೇಲೆ ನಿಗಾ ಇಡಲಾಗಿದೆ.

ಪಂದ್ಯದ ವೇಳೆ ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡು ಮೊಬೈಲ್ ಕಳ್ಳತನ ಮಾಡುವ ತಂಡಗಳ ಚಟುವಟಿಕೆಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು, ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ರೋಚಕ ಪಂದ್ಯಾವಳಿಯ ಜೊತೆಗೆ ಅಭಿಮಾನಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಗರ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande