
ಕರ್ನೂಲ್, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕಲದೋಣ ಬಳಿ ಬುಲೆರೋ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಅಮೃತ, ತೇಜಶ್ವಿನಿ, ಧನ್ಯಾ, ದೀಪಿಕಾ, ದಿಕ್ಷಿತ್, ಪ್ರತಾಪ್, ಕುಮಾರ್ ಹಾಗೂ ಯಶೋದಮ್ಮ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತಪಟ್ಟವರಲ್ಲಿ ಮೂರು ವರ್ಷದ ಮಗು ಸೇರಿದಂತೆ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರು ಇದ್ದಾರೆ ಎಂದು ತಿಳಿದುಬಂದಿದೆ.
ಇಂದು ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಬುಲೆರೋ ವಾಹನಕ್ಕೆ ಬೀದರ್ನಿಂದ ತುಮಕೂರಿನತ್ತ ಸಾಗುತ್ತಿದ್ದ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬುಲೆರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಇನ್ನುಳಿದವರನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa