ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ; ಮಹಿಳಾ ಮೀಸಲಾತಿ ಕುರಿತು ಚರ್ಚೆ
ನವದೆಹಲಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಜಾರಿಗೆ ದಾರಿಯೊಡ್ಡುವ ಹಾಗೂ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಮೂರು ಮಹತ್ವದ ಮಸೂದೆಗಳನ್ನು ಕೇಂದ್ರ ಸರ್ಕಾರ ಇಂದು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಿದೆ.
File photo


ನವದೆಹಲಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಜಾರಿಗೆ ದಾರಿಯೊಡ್ಡುವ ಹಾಗೂ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಮೂರು ಮಹತ್ವದ ಮಸೂದೆಗಳನ್ನು ಕೇಂದ್ರ ಸರ್ಕಾರ ಇಂದು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಿದೆ.

ಸಂವಿಧಾನದ (131ನೇ ತಿದ್ದುಪಡಿ) ಮಸೂದೆ, 2026, ಡಿಲಿಮಿಟೇಶನ್ ಮಸೂದೆ, 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಎಂಬ ಮೂರು ಪ್ರಸ್ತಾಪಿತ ಮಸೂದೆಗಳು 2029ರ ಲೋಕಸಭಾ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ಬರುವಂತೆ ಕಾನೂನುಬದ್ಧ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿವೆ.

ಇವುಗಳಲ್ಲಿ ಪ್ರಮುಖವಾದ ಸಂವಿಧಾನದ (131ನೇ ತಿದ್ದುಪಡಿ) ಮಸೂದೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಲು ಅಗತ್ಯವಾದ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಆರಂಭಿಸಲು ಅವಕಾಶ ಮಾಡಿಕೊಡಲಿದೆ. ಈ ಮೂಲಕ 2023ರಲ್ಲಿ ಅಂಗೀಕರಿಸಲಾದ ‘ನಾರಿ ಶಕ್ತಿ ವಂದನಾ ಕಾಯ್ದೆ’ಗೆ ಕಾರ್ಯರೂಪ ನೀಡುವ ದಿಕ್ಕಿನಲ್ಲಿ ಸರ್ಕಾರ ಮುಂದಾಗಿದೆ.

ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಅಂಗೀಕರಿಸಲು ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವ ಸರ್ಕಾರ, ಮಸೂದೆಗಳ ಚರ್ಚೆ ಮತ್ತು ಅಂಗೀಕಾರಕ್ಕೆ ಆದ್ಯತೆ ನೀಡಿದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ದೊಡ್ಡ ಮಟ್ಟದ ವಿರೋಧ ಎದುರಾಗುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ವಲಯಗಳು ಅಂದಾಜಿಸಿವೆ.

ಆದರೆ, ಡಿಲಿಮಿಟೇಶನ್ ಪ್ರಕ್ರಿಯೆ ಕುರಿತಂತೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುವ ಸಾಧ್ಯತೆ ಇದೆ. ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ ದಕ್ಷಿಣ ಭಾರತದ ರಾಜ್ಯಗಳು, ಹೊಸ ಕ್ಷೇತ್ರ ಮರುವಿಂಗಡಣೆಯಲ್ಲಿ ತಮ್ಮ ಲೋಕಸಭಾ ಸ್ಥಾನಗಳು ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

ಈ ಆತಂಕವನ್ನು ಸರ್ಕಾರ ತಳ್ಳಿಹಾಕಿದ್ದು, ಯಾವುದೇ ರಾಜ್ಯದ ಹಾಲಿ ಸ್ಥಾನಗಳಲ್ಲಿ ಕಡಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರತಿಯೊಂದು ರಾಜ್ಯಕ್ಕೂ ಸಮಾನವಾಗಿ ಸುಮಾರು ಶೇಕಡಾ 50ರಷ್ಟು ಸ್ಥಾನ ಹೆಚ್ಚಳವಾಗಲಿದೆ ಎಂದು ಹೇಳಿದೆ. ಪ್ರಸ್ತುತ 543 ಸ್ಥಾನಗಳನ್ನು ಹೊಂದಿರುವ ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 850ರವರೆಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ.

1976ರಿಂದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿಲ್ಲ ಎಂದು ಸರ್ಕಾರ ಹೇಳಿದ್ದು, 2011ರ ಜನಗಣತಿ ಆಧಾರದ ಮೇಲೆ ಹೊಸ ಡಿಲಿಮಿಟೇಶನ್ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಡಿಲಿಮಿಟೇಶನ್ ಆಯೋಗ ರಚಿಸಲಾಗಿದ್ದು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಅಂತಿಮವಾಗಿ ಕ್ಷೇತ್ರಗಳ ಹಂಚಿಕೆ ಮತ್ತು ಮರುವಿಂಗಡಣೆ ನಿರ್ಧಾರವಾಗಲಿದೆ.

ಈ ಮೂರೂ ಮಸೂದೆಗಳ ಬಗ್ಗೆ ಇಂದು ಲೋಕಸಭೆಯಲ್ಲಿ ಸುಮಾರು 18 ಗಂಟೆಗಳ ಚರ್ಚೆ ನಡೆಯಲಿದ್ದು, ಏಪ್ರಿಲ್ 17ರಂದು ಮತದಾನ ನಡೆಯುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ಏಪ್ರಿಲ್ 18ರಂದು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಸುಮಾರು 10 ಗಂಟೆಗಳ ಚರ್ಚೆಯ ಬಳಿಕ ಮತದಾನ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande