
ಕೋಲ್ಕತ್ತಾ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿರ್ಭುಮ್ ಜಿಲ್ಲೆಯ ಬೋಲ್ಪುರದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ “ಗೂಂಡಾ ರಾಜ್” ನೆಲೆಸಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, “ಮೇ 4 ನಂತರ ಗೂಂಡಾಗಳನ್ನು ಬೇಟೆಯಾಡಿ ಜೈಲಿಗೆ ಹಾಕಲಾಗುತ್ತದೆ” ಎಂದು ಹೇಳಿದರು. 2021ರ ಚುನಾವಣೆಯ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ, ಜನತೆ ಬದಲಾವಣೆಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಏಪ್ರಿಲ್ 23ರಂದು ನಡೆಯುವ ಮತದಾನದಲ್ಲಿ ಭಯವಿಲ್ಲದೆ ಮತ ಚಲಾಯಿಸುವಂತೆ ಕರೆ ನೀಡಿದ ಅಮಿತ್ ಶಾ, “ಬಾಂಬ್ಗೆ ಮತಪತ್ರದಿಂದ ಉತ್ತರಿಸಿ” ಎಂದು ಹೇಳಿದರು. ಟಿಎಂಸಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಅವರು, “ಮತದಾನದ ದಿನ ಮನೆಯಲ್ಲೇ ಇರಲಿ, ಇಲ್ಲದಿದ್ದರೆ ಕ್ರಮ ಅನಿವಾರ್ಯ” ಎಂದು ಹೇಳಿದರು.
“ಡಬಲ್ ಎಂಜಿನ್ ಸರ್ಕಾರ” ಕುರಿತು ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳಾ ಸುರಕ್ಷತೆ ವಿಚಾರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕೆ ಮಾಡಿದ ಅವರು, ಮಹಿಳಾ ಮುಖ್ಯಮಂತ್ರಿಯಿದ್ದರೂ ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರ ವಿಷಯದಲ್ಲೂ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಶಿಕ್ಷಕರ ನೇಮಕಾತಿ, ಪಡಿತರ, ಮನರೇಗಾ ಮತ್ತು ವಸತಿ ಯೋಜನೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.
ಒಳನುಸುಳುವಿಕೆ ವಿಚಾರ ಪ್ರಸ್ತಾಪಿಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ “ಒಳನುಸುಳುವವರನ್ನು ಗುರುತಿಸಿ ಹೊರಹಾಕಲಾಗುತ್ತದೆ” ಎಂದು ಹೇಳಿದರು. ಜೊತೆಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಭರವಸೆಯನ್ನು ಪುನರುಚ್ಚರಿಸಿದರು.
ಸಭೆಯ ಆರಂಭದಲ್ಲಿ ವೇದಿಕೆಯಲ್ಲಿದ್ದ ಭದ್ರತಾ ಅಡೆತಡೆಗಳನ್ನು ತೆರವುಗೊಳಿಸಲು ಸೂಚಿಸಿದ ಅಮಿತ್ ಶಾ, ಸಾರ್ವಜನಿಕರಿಗೆ ನಿರ್ಬಂಧವಿಲ್ಲದೆ ಪ್ರವೇಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa