
ಗದಗ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ್ ಅಕ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಹಿಳಾ ಮೀಸಲಾತಿ ಒತ್ತಾಸೆಯನ್ನು ನಾರಿ ಶಕ್ತಿಗಾಗಿ ನಡೆದ ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದರು. ಇದು ಸ್ವತಂತ್ರ ಭಾರತದ ಪ್ರಮುಖ ಪ್ರಜಾಪ್ರಭುತ್ವ ಸುಧಾರಣೆಗಳಿಗೆ ಸಮಾನವಾದ ಹೆಜ್ಜೆ ಎಂದು ಅವರು ಹೇಳಿದರು.
ಗದಗದಲ್ಲಿ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ ಅಕ್ಕಿ, ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇಂದಿನ ಅಗತ್ಯ ಎಂದು ಮೋದಿ ಘೋಷಿಸಿದ್ದಾರೆ ಮತ್ತು ಲೋಕ ಸಭೆ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ವಿಷಯದಲ್ಲಿ ಎಲ್ಲ ಪಕ್ಷಗಳು ಒಂದಾಗಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ದೇಶದ ಪ್ರಗತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮಶೀಲತೆ, ಕ್ರೀಡೆ, ಸಶಸ್ತ್ರ ಪಡೆಗಳು ಮತ್ತು ಕಲೆ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಮೋದಿಜಿ ಹೇಳಿದ್ದಾರೆ. ಈ ಸುಧಾರಣೆಯನ್ನು ವಿಳಂಬ ಮಾಡುವುದು ದುರದೃಷ್ಟಕರ ಎಂದು ಅವರು ಎಚ್ಚರಿಸಿದ್ದಾರೆ. ಇದು ಕೇವಲ ಮಸೂದೆ ಅಲ್ಲ, ತಾಯಂದಿರು ಮತ್ತು ಸಹೋದರಿಯರನ್ನು ನೀತಿ ನಿರೂಪಣೆಯ ಕೇಂದ್ರದಲ್ಲಿ ಇಡುವ ಐತಿಹಾಸಿಕ ಚಳವಳಿ, ಎಂದು ಸಂತೋಷ ಅಕ್ಕಿ ಹೇಳಿದರು.
ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮೀಸಲಾತಿಯಿಂದ ಹಿಡಿದು ನೈರ್ಮಲ್ಯ, ಆರೋಗ್ಯ ಮತ್ತು ಸ್ವಾವಲಂಬನೆಯವರೆಗೆ - ಪ್ರತಿಯೊಂದು ವಲಯದಲ್ಲೂ ಮಹಿಳೆಯರು ಹೊಸ ಹಕ್ಕು ಮತ್ತು ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಉಜ್ವಲ, ಸ್ವಚ್ಛ ಭಾರತ್ ಮತ್ತು ಮುದ್ರಾ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿದ್ದು, ಸುರಕ್ಷಿತ ಮತ್ತು ಆತ್ಮನಿರ್ಭರರನ್ನಾಗಿಸುವಲ್ಲಿ ನೆರವಾಗಿವೆ - ಇದು ನವ ಭಾರತದ ನಿಜವಾದ ಗುರುತು. ಸೇನೆಯಲ್ಲಿ 'ನಾರಿ ಶಕ್ತಿ'ಯ ಬಲವರ್ಧನೆಗೆ ಮೋದಿ ಸರ್ಕಾರದ ದೃಢವಾದ ಹೆಜ್ಜೆ. ರಕ್ಷಣಾ ಪಡೆಯ ಮೂರೂ ವಿಭಾಗಗಳಲ್ಲಿ ಅಗ್ನಿವೀರರಾಗಿ, ಸೇನೆಯ 12 ವಿಭಾಗಗಳಲ್ಲಿ ಕಾಯಂ ಅಧಿಕಾರಿಗಳಾಗಿ ಹಾಗೂ ಸಿಐಎಸ್ಎಫ್ನ ಮೊದಲ ಮಹಿಳಾ ಬೆಟಾಲಿಯನ್ ಸ್ಥಾಪನೆಯ ಮೂಲಕ ರಾಷ್ಟ್ರ ರಕ್ಷಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಮಹಿಳಾ ಅಭಿವೃದ್ಧಿಯಲ್ಲಿ ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ನವ ಭಾರತವಿದು. 2023ರಲ್ಲಿ ಅಂಗೀಕೃತವಾದ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಏಪ್ರಿಲ್ 16ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಂತೋಷ ಅಕ್ಕಿ ತಿಳಿಸಿದರು. ಪ್ರಧಾನ ಮಂತ್ರಿಗಳು ಎಲ್ಲ ಸಂಸದರು ಒಗ್ಗಟ್ಟಿನಿಂದ ಈ ತಿದ್ದುಪಡಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ ಎಂದರು.
ಈ ಕ್ರಮವನ್ನು ಪರಿವರ್ತನಾಕಾರಿ ಎಂದು ಕರೆದ ಅವರು, ಪ್ರಸ್ತಾವಿತ ಪುನರ್ ವಿಂಗಡಣೆಯ ಮೂಲಕ ಲೋಕಸಭೆಯ ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವುದರಿಂದ ಅಸ್ತಿತ್ವದಲ್ಲಿರುವ ಪ್ರಾತಿನಿಧ್ಯಕ್ಕೆ ತೊಂದರೆಯಾಗದಂತೆ ಶೇಕಡಾ 33ರ ಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗುತ್ತದೆ ಮತ್ತು 2029ರ ಚುನಾವಣೆಯ ವೇಳೆಗೆ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.
75 ವರ್ಷಗಳ ಕಡಿಮೆ ಪ್ರಾತಿನಿಧ್ಯಕ್ಕೆ ಮೋದಿಜಿ ನೀಡುತ್ತಿರುವ ಐತಿಹಾಸಿಕ ತಿದ್ದುಪಡಿ ಇದು. ಹಿಂದಿನ ಚಳವಳಿಗಳು ಮಹಿಳೆಯರಿಗೆ ಮತ ನೀಡಿದವು, ಈ ಚಳವಳಿ ಅವರಿಗೆ ಅಧಿಕಾರದ ಕುರ್ಚಿ ನೀಡುತ್ತದೆ, ಎಂದು ಸಂತೋಷ ಅಕ್ಕಿ ಹೇಳಿದರು.
ರಾಷ್ಟ್ರೀಯ ಒತ್ತಾಸೆಯನ್ನು ಉತ್ತರ ಕರ್ನಾಟಕಕ್ಕೆ ಜೋಡಿಸುತ್ತಾ, ಗದಗ, ರೋಣ, ನರಗುಂದ, ಮುಂಡರಗಿ, ಶಿರಹಟ್ಟಿಯ ಹೆಣ್ಣುಮಕ್ಕಳು ಸ್ವಸಹಾಯ ಸಂಘಗಳು ಮತ್ತು ಕಾಲೇಜು ಕ್ಯಾಂಪಸ್ಗಳಿಂದ ಪಂಚಾಯತ್, ವಿಧಾನಸೌಧ ಮತ್ತು ಸಂಸತ್ತಿನವರೆಗೆ ನಾಯಕತ್ವ ವಹಿಸಲು ಇದು ದಾರಿ ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.ನಮ್ಮ ಜಿಲ್ಲೆಯಲ್ಲಿ ಐದು ತಾಲೂಕುಗಳಲ್ಲಿ ನಾರಿ ಶಕ್ತಿ ಯುವ ಸಂವಾದಗಳನ್ನು ಮತ್ತು ಮಸೂದೆಯ ಮಹತ್ವ ವಿವರಿಸಲು ಮನೆ ಮನೆ ಪ್ರಚಾರ ಗದಗ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತರು ನಡೆಸಲಾಗುವುದು ಎಂದು ಅವರು, ಬೇಟಿ ಬಚಾವೋ ಬೇಟಿ ಪಡಾವೋದಿಂದ ಲಖಪತಿ ದೀದಿವರೆಗೆ, ಈಗ ಶೇಕಡಾ 33ರ ರಾಜಕೀಯ ಮೀಸಲಾತಿವರೆಗೆ, ಮೋದಿಜಿ ಮಹಿಳಾ ಸಬಲೀಕರಣವನ್ನು ಘೋಷಣೆಯಿಂದ ರಚನೆಗೆ ಪರಿವರ್ತಿಸಿದ್ದಾರೆ. ಯುವ ಮೋರ್ಚಾಕ್ಕೆ ಇದು ನಮ್ಮ ಪೀಳಿಗೆಯ ಐತಿಹಾಸಿಕ ಕರ್ತವ್ಯ. ಈ ಚಳವಳಿಯನ್ನು ಗದಗದ ಜಿಲ್ಲೆಯ ಪ್ರತಿ ಬೂತ್ಗೂ ಕೊಂಡೊಯ್ಯುತ್ತೇವೆ, ಎಂದು ಸಂತೋಷ ಅಕ್ಕಿ ನುಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP