
ನವದೆಹಲಿ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಚಿಂತೆ ಹೆಚ್ಚಿಸುವ ಘಟನೆಯೊಂದರಲ್ಲಿ, ದೆಹಲಿಯ ಸಿವಿಕ್ ಸೆಂಟರ್ನಲ್ಲಿರುವ ಮೇಯರ್ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿಸಲಾಗಿದೆ.
ದೆಹಲಿಯ ಸಿವಿಕ್ ಸೆಂಟರ್ನಲ್ಲಿರುವ ಮೇಯರ್ ಕಚೇರಿಗೆ ಬುಧವಾರ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ಮಧ್ಯಾಹ್ನ 2:11ರ ಸುಮಾರಿಗೆ ಸ್ಫೋಟ ನಡೆಸುವುದಾಗಿ ಹೇಳಲಾಗಿತ್ತು. ಈ ಬೆದರಿಕೆ ಸಂದೇಶವನ್ನು ಖಲಿಸ್ತಾನ್ ರಾಷ್ಟ್ರೀಯ ಸೇನೆ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ತಿಳಿದ ತಕ್ಷಣ ದೆಹಲಿ ವಿಶೇಷ ತಂಡ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ಸಂಪೂರ್ಣ ಸಂಕೀರ್ಣವನ್ನು ತಪಾಸಣೆ ನಡೆಸಿತು. ಹಲವು ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿ ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಸಿವಿಕ್ ಸೆಂಟರ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಯೊಂದು ಭಾಗವನ್ನೂ ನಿಖರವಾಗಿ ಪರಿಶೀಲಿಸಲಾಗುತ್ತಿದೆ.
ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರ ಕಚೇರಿ ಗುರಿಯಾಗಿರುವುದು ಗಮನಾರ್ಹವಾಗಿದ್ದು, ಘಟನೆಯ ಕುರಿತು ಸಂಪೂರ್ಣ ತನಿಖೆ ಮುಂದುವರಿದಿದೆ.
ಇದೇ ವೇಳೆ, ದೆಹಲಿ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕ ಅಂಕುಶ್ ನಾರಂಗ್ ಈ ಘಟನೆಗೆ ತೀವ್ರ ಆತಂಕ ವ್ಯಕ್ತಪಡಿಸಿ, ನಗರದ ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಟೀಕಿಸಿದ್ದಾರೆ. ‘ನಾಲ್ಕು ಎಂಜಿನ್ ಸರ್ಕಾರದ ನಡುವೆಯೂ ಮೊದಲ ನಾಗರಿಕರೇ ಸುರಕ್ಷಿತವಾಗಿಲ್ಲ’ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ದೆಹಲಿ ವಿಧಾನಸಭೆಗೂ ಇದೇ ರೀತಿಯ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆ ಸಂದರ್ಭದಲ್ಲೂ ಪೊಲೀಸರು ಹಾಗೂ ಶ್ವಾನ ದಳದಿಂದ ನಡೆಸಿದ ತಪಾಸಣೆಯಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿರಲಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa