
ಕಠ್ಮಂಡು, 09 ಮಾರ್ಚ್ (ಹಿ.ಸ.):
ಆ್ಯಂಕರ್:
ನೇಪಾಳದ ಇತ್ತೀಚಿನ ಸಂಸತ್ ಚುನಾವಣೆಯಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಆಗ್ರಹಿಸಿದ್ದ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ. ರಾಜಪ್ರಭುತ್ವ ಪರವಾದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಬಹುತೇಕ ಸಂಪೂರ್ಣ ಸೋಲನುಭವಿಸಿದ್ದು, ಪಕ್ಷದ ಒಬ್ಬ ಅಭ್ಯರ್ಥಿ ಮಾತ್ರ ಗೆಲುವು ಸಾಧಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲಿಂಗ್ಡೆನ್ ಸೇರಿದಂತೆ ಪ್ರಮುಖ ನಾಯಕರು ಸೋಲನುಭವಿಸಿರುವುದು ರಾಜಪ್ರಭುತ್ವ ಪರ ರಾಜಕೀಯದ ಭವಿಷ್ಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚುನಾವಣಾ ಪ್ರಚಾರದ ವೇಳೆ ಆರ್‌ಪಿಪಿ ರಾಜಪ್ರಭುತ್ವದ ಪುನಃಸ್ಥಾಪನೆಯನ್ನು ಪ್ರಮುಖ ಅಜೆಂಡಾವಾಗಿಸಿಕೊಂಡಿದ್ದರೂ, ಮತದಾರರು ಈ ವಿಚಾರಕ್ಕೆ ಸ್ಪಷ್ಟ ಬೆಂಬಲ ನೀಡಲಿಲ್ಲ. ಆದರೆ ಯುವ ನಾಯಕ ಜ್ಞಾನೇಂದ್ರ ಶಾಹಿ ಜುಮ್ಲಾ ಸಂಸದೀಯ ಕ್ಷೇತ್ರದಿಂದ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಪಕ್ಷದ ಅನೇಕ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ. ಮಾಜಿ ಉಪಪ್ರಧಾನಿ ಕಮಲ್ ಥಾಪಾ, ಮಾಜಿ ಪೊಲೀಸ್ ಮುಖ್ಯಸ್ಥ ಮತ್ತು ಮಾಜಿ ಸಚಿವ ಧ್ರುವ್ ಬಹದ್ದೂರ್ ಪ್ರಧಾನ್, ಖ್ಯಾತ ಪತ್ರಕರ್ತ ಹಾಗೂ ರಾಜಕಾರಣಿ ರವೀಂದ್ರ ಮಿಶ್ರಾ ಮತ್ತು ಹಿರಿಯ ನಾಯಕ ದೀಪಕ್ ಬಹದ್ದೂರ್ ಸಿಂಗ್ ಸೇರಿದಂತೆ ಹಲವರು ಸೋತಿದ್ದಾರೆ.
ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರವೀಂದ್ರ ಮಿಶ್ರಾ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದರು. ಕಠ್ಮಂಡು ಕ್ಷೇತ್ರದಲ್ಲಿ ರಂಜು ದರ್ಶನ ವಿರುದ್ಧ ಭಾರೀ ಅಂತರದಿಂದ ಸೋತ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಮಿಶ್ರಾ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ, “ದೇಶದಲ್ಲಿ ರಾಜಪ್ರಭುತ್ವದ ಬಗ್ಗೆ ಜನರಲ್ಲಿ ಗೌರವವಿದ್ದರೂ, ಪಕ್ಷದ ಒಳಜಗಳಗಳು ಮತ್ತು ನಾಯಕತ್ವದ ಕೊರತೆಯಿಂದ ಅದನ್ನು ಮತಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಫಲಿತಾಂಶವು ನೇಪಾಳದಲ್ಲಿ ಗಣರಾಜ್ಯ ವ್ಯವಸ್ಥೆಯ ಮೇಲಿನ ಜನರ ಒಲವು ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. 2008ರಲ್ಲಿ ನೇಪಾಳದಲ್ಲಿ ರಾಜಪ್ರಭುತ್ವ ರದ್ದುಪಡಿಸಿದ ನಿರ್ಧಾರ 2008 ನಂತರ ದೇಶವನ್ನು ಫೆಡರಲ್ ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಲಾಗಿತ್ತು.
ಈ ಹಿನ್ನೆಲೆದಲ್ಲಿ ಮಾಜಿ ರಾಜ ಜ್ಞಾನೇಂದ್ರ ಶಾ ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆಗಳು ಇನ್ನಷ್ಟು ಕುಗ್ಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಜಪ್ರಭುತ್ವದ ಪರವಾಗಿ ಕೆಲವು ಸಂಘಟನೆಗಳು ಮತ್ತು ಸಣ್ಣ ಗುಂಪುಗಳು ಕಾಲಕಾಲಕ್ಕೆ ಬೇಡಿಕೆಗಳನ್ನು ಮುಂದಿಟ್ಟರೂ, ಚುನಾವಣಾ ರಾಜಕೀಯದಲ್ಲಿ ಅವುಗಳ ಪ್ರಭಾವ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ.
ಆರ್‌ಪಿಪಿಯ ಸ್ಥಾಪಕ ನಾಯಕರಲ್ಲಿ ಒಬ್ಬರಾದ ಪಶುಪತಿ ಶಂಶೇರ್ ರಾಣಾ ಅವರ ಪ್ರಕಾರ, ಚುನಾವಣಾ ಮಟ್ಟದಲ್ಲಿ ವ್ಯಾಪಕ ಜನಬೆಂಬಲ ದೊರೆಯದ ಹೊರತು ರಾಜಪ್ರಭುತ್ವ ಪುನಃಸ್ಥಾಪನೆ ಬಲವಾದ ರಾಜಕೀಯ ವಿಷಯವಾಗಲು ಸಾಧ್ಯವಿಲ್ಲ.
ಸೋಲಿನ ಪ್ರಮುಖ ಕಾರಣಗಳು
ಗಣರಾಜ್ಯ ವ್ಯವಸ್ಥೆಯ ಸ್ವೀಕಾರ: ಕಳೆದ 15 ವರ್ಷಗಳಲ್ಲಿ ನೇಪಾಳದ ಗಣರಾಜ್ಯ ವ್ಯವಸ್ಥೆ ಕ್ರಮೇಣ ಬಲಪಡಿಸಿದೆ. ವಿಶೇಷವಾಗಿ ಯುವ ಮತದಾರರು ಇದನ್ನೇ ಭವಿಷ್ಯವೆಂದು ನೋಡುತ್ತಿದ್ದಾರೆ.
ಹೊಸ ರಾಜಕೀಯ ಮುಖಗಳ ಉದಯ: ಹೊಸ ನಾಯಕರು ಹಾಗೂ ಪರ್ಯಾಯ ರಾಜಕೀಯವನ್ನು ಮುಂದಿಟ್ಟವರ ಬೆಂಬಲ ಹೆಚ್ಚಾಗಿದೆ. ಕಠ್ಮಂಡು ಮೇಯರ್ ಬಾಲೇಂದ್ರ ಷಾ ಅವರ ಪ್ರಭಾವವೂ ಚುನಾವಣೆಯಲ್ಲಿ ಗಮನಾರ್ಹವಾಗಿತ್ತು.
ರಾಜಪ್ರಭುತ್ವದ ವಿವಾದಾತ್ಮಕ ಇತಿಹಾಸ: ರಾಜಪ್ರಭುತ್ವದ ಕೊನೆಯ ವರ್ಷಗಳಲ್ಲಿ ನಡೆದ ರಾಜಕೀಯ ಅಸ್ಥಿರತೆ ಇನ್ನೂ ಮತದಾರರ ಮನಸ್ಸಿನಲ್ಲಿ ಉಳಿದಿದೆ.
ಸ್ಥಳೀಯ ಸಮಸ್ಯೆಗಳ ಪ್ರಾಮುಖ್ಯತೆ: ಉದ್ಯೋಗ, ಭ್ರಷ್ಟಾಚಾರ, ಅಭಿವೃದ್ಧಿ ಹಾಗೂ ಆಡಳಿತದ ಸಮಸ್ಯೆಗಳು ಮತದಾರರ ಪ್ರಮುಖ ವಿಚಾರಗಳಾಗಿದ್ದವು.
ಖ್ಯಾತ ರಾಜಕೀಯ ವಿಶ್ಲೇಷಕ ಸಿ.ಕೆ. ಲಾಲ್ ಅವರ ಪ್ರಕಾರ, ಈ ಫಲಿತಾಂಶವು ನೇಪಾಳದ ಜನರು ರಾಜಪ್ರಭುತ್ವ ಪುನಃಸ್ಥಾಪನೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ರಾಜಪ್ರಭುತ್ವದ ಪರ ಭಾವನೆಗಳು ಇನ್ನೂ ಸೀಮಿತವಾಗಿ ಮುಂದುವರಿಯುವ ಸಾಧ್ಯತೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa