
ಅಹಮದಾಬಾದ್, 08 ಮಾರ್ಚ್ (ಹಿ.ಸ.):
ಆ್ಯಂಕರ್:
ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ನಡೆದ ಟ್ವೆಂಟಿ–20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸತತ ಮೂರನೇ ಬಾರಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಭಾರತ ಒಟ್ಟು ಮೂರನೇ ಬಾರಿ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.
ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಫೋಟಕ ಆಟ ಪ್ರದರ್ಶಿಸಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅವರು 21 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ತಂಡಕ್ಕೆ ವೇಗದ ಆರಂಭ ನೀಡಿದರು.
ನಂತರ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಜೋಡಿ ಉತ್ತಮ ಜೊತೆಯಾಟ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 48 ಎಸೆತಗಳಲ್ಲಿ 105 ರನ್‌ಗಳನ್ನು ಕಲೆಹಾಕಿತು. ಸಂಜು ಸ್ಯಾಮ್ಸನ್ 89 ರನ್ ಗಳಿಸಿ ಶತಕದ ಅಂಚಿನಲ್ಲಿ ನಿರ್ಗಮಿಸಿದರು. ಬಳಿಕ ಇಶಾನ್ ಕಿಶನ್ 54 ರನ್ ಗಳಿಸಿ ಅರ್ಧಶತಕ ಸಾಧಿಸಿದರು.
ಕೊನೆಯಲ್ಲಿ ಶಿವಂ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಬಾರಿಸಿ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು. ನ್ಯೂಜಿಲೆಂಡ್ ಪರ ಜೇಮ್ಸ್ ನಿಶಾಮ್ ಮೂರು ವಿಕೆಟ್ ಪಡೆದರು.
256 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ವೇಗವಾಗಿ ರನ್ ಗಳಿಸಿತು. ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ ಆರಂಭಿಕ ಜೊತೆಯಾಟದಲ್ಲಿ 31 ರನ್ ಸೇರಿಸಿದರು.
ಆದರೆ ಅಕ್ಷರ್ ಪಟೇಲ್ ಮೊದಲ ವಿಕೆಟ್ ಪಡೆದ ಬಳಿಕ ಪಂದ್ಯ ಭಾರತ ಪರ ತಿರುಗಿತು. ನಂತರ ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್ಮನ್ ಬೇಗನೆ ಔಟಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಕೇವಲ 72 ರನ್‌ಗಳಿಗೆ ಅರ್ಧ ತಂಡ ಪೆವಿಲಿಯನ್ ಸೇರಿದಿತು.
ನ್ಯೂಜಿಲೆಂಡ್ ಪರ ಟಿಮ್ ಸೈಫರ್ಟ್ 52 ರನ್ ಗಳಿಸಿ ಅರ್ಧಶತಕ ಸಿಡಿಸಿದರೆ, ಮಿಚೆಲ್ ಸ್ಯಾಂಟ್ನರ್ 43 ರನ್ ಗಳಿಸಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa