
ಹರಿಯಾಣ, 07 ಮಾರ್ಚ್ (ಹಿ.ಸ.):
ಆ್ಯಂಕರ್:
2002ರಲ್ಲಿ ನಡೆದ ಪತ್ರಕರ್ತ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ. ಶನಿವಾರ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ವೀರೇಂದ್ರ ಅಗರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
2002ರಲ್ಲಿ ಹತ್ಯೆಗೀಡಾದ ಪತ್ರಕರ್ತ ರಾಮಚಂದ್ರ ಛತ್ರಪತಿ ಪ್ರಕರಣದಲ್ಲಿ, ಸುಮಾರು ಏಳು ವರ್ಷಗಳ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಮ್ ಅವರನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು. ಬಳಿಕ ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ರಾಮ್ ರಹೀಮ್ ಅವರನ್ನು ಖುಲಾಸೆಗೊಳಿಸಿದೆ.
ಸುದೀರ್ಘ ತನಿಖೆಯ ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ತನಿಖೆಯ ನಂತರ ರಾಮ್ ರಹೀಮ್ ಸೇರಿದಂತೆ ಹಲವು ಮಂದಿಯ ವಿರುದ್ಧ ಕೊಲೆ ಆರೋಪ ದಾಖಲಿಸಲಾಗಿತ್ತು. 2019ರಲ್ಲಿ ಸಿಬಿಐ ನ್ಯಾಯಾಲಯ ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸಿತ್ತು.
ಇದಕ್ಕೂ ನಡುವೆಯೇ ರಾಮ್ ರಹೀಮ್ ಪ್ರಸ್ತುತ ಸಾಧ್ವಿ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಹತ್ಯೆಗೀಡಾದ ರಾಮಚಂದ್ರ ಛತ್ರಪತಿ ಸಿರ್ಸಾದಿಂದ ತಮ್ಮದೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಡೇರಾ ಸಚ್ಚಾ ಸೌದಾಗೆ ಸಂಬಂಧಿಸಿದ ಹಲವು ವಿವಾದಾತ್ಮಕ ಸುದ್ದಿಗಳನ್ನು ಅವರು ಬಹಿರಂಗಪಡಿಸಿದ್ದರು. ವಿಶೇಷವಾಗಿ ಸಾಧ್ವಿಯರ ಲೈಂಗಿಕ ಶೋಷಣೆ ಪ್ರಕರಣದ ಸುದ್ದಿಯನ್ನು ತಮ್ಮ ಸ್ಥಳೀಯ ಪತ್ರಿಕೆಯಲ್ಲಿ ಮೊದಲಿಗೆ ಪ್ರಕಟಿಸಿದ್ದರು. ಅದರ ಕೆಲಕಾಲದ ಬಳಿಕ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ರಾಮ್ ರಹೀಮ್ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದ್ದರೂ, ಉಳಿದ ಆರೋಪಿಗಳಾದ ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷ್ಣಲಾಲ್ ಅವರ ಮೇಲ್ಮನವಿಗಳನ್ನು ತಿರಸ್ಕರಿಸಿ, ಅವರ ಶಿಕ್ಷೆಯನ್ನು ನ್ಯಾಯಾಲಯ ಮುಂದುವರಿಸಿದೆ.
ಈ ತೀರ್ಪು ದೀರ್ಘಕಾಲದಿಂದ ಚರ್ಚೆಯಲ್ಲಿದ್ದ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಕಾನೂನು ತಿರುವು ಎಂದು ಪರಿಗಣಿಸಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa