
ನವದೆಹಲಿ, 07 ಮಾರ್ಚ್ (ಹಿ.ಸ.):
ಆ್ಯಂಕರ್:
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೇಂದ್ರ ಸರ್ಕಾರವು ಮಾರ್ಚ್ 8ರಂದು ‘ಶಿ ಲೀಡ್ಸ್ ಇಂಡಿಯಾ’ ಶಕ್ತಿ ನಡಿಗೆಯನ್ನು ಆಯೋಜಿಸಿದೆ. ಈ ನಡಿಗೆಯಲ್ಲಿ ಸುಮಾರು 3,000 ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಬೆಳಿಗ್ಗೆ 7:30ರಿಂದ 10:00ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ದೆಹಲಿಯ ಇಂಡಿಯಾ ಗೇಟ್ ನಿಂದ ವಿಜಯ ಚೌಕ್ ವರೆಗೆ ಇರುವ ಕರ್ತವ್ಯ ಪಥ ಮಾರ್ಗದಲ್ಲಿ ಸುಮಾರು 2 ಕಿಲೋಮೀಟರ್ ಶಕ್ತಿ ನಡಿಗೆ ನಡೆಯಲಿದೆ.
150ಕ್ಕೂ ಹೆಚ್ಚು ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಂದ ಮಹಿಳೆಯರು ಈ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಶಸ್ತ್ರ ಪಡೆಗಳು, ಪೊಲೀಸ್, ಮಾಧ್ಯಮ, ಆರೋಗ್ಯ, ಕ್ರೀಡೆ, ಕೈಗಾರಿಕೆ, ಸರ್ಕಾರಿ ಸಂಸ್ಥೆಗಳು ಹಾಗೂ ತಳಮಟ್ಟದ ಸಂಘಟನೆಗಳ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
“‘ಶಿ ಲೀಡ್ಸ್ ಇಂಡಿಯಾ’” ಎಂಬ ವಿಷಯದಡಿ ಮಹಿಳೆಯರ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ನಡಿಗೆಯಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಮಹಿಳಾ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಿ ನೇತೃತ್ವ ವಹಿಸಲಿದ್ದಾರೆ.
ಕಾರ್ಯಕ್ರಮವು ಗಣ್ಯರ ಸಂಕ್ಷಿಪ್ತ ಭಾಷಣಗಳಿಂದ ಆರಂಭವಾಗಿ ನಂತರ ಶಕ್ತಿ ನಡಿಗೆಗೆ ಚಾಲನೆ ನೀಡಲಾಗುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ಪ್ರಮುಖ ಸರ್ಕಾರಿ ಯೋಜನೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಪರಿಚಯಿಸುವ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಇದೇ ವೇಳೆ ಇಂಡಿಯಾ ಗೇಟ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಂದೇ ಮಾತರಂ, ಡೊಳ್ಳು ಕುಣಿತ, ಶೃಂಗರಿಮೇಳಂ, ರಾಂಚಂಡಿ ಹಾಗೂ ಗೂಮರ್ ಸೇರಿದಂತೆ ವಿವಿಧ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನವೂ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa