



ಕೊಪ್ಪಳ, 06 ಮಾರ್ಚ್ (ಹಿ.ಸ.):
ಆ್ಯಂಕರ್ : ಆರೋಗ್ಯ ಮನುಷ್ಯನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸಮಗ್ರ ಸ್ಥಿತಿಯಾಗಿದ್ದು ನಮ್ಮ ಜೀವನದಲ್ಲಿ ಪರಿಸರ ಮತ್ತು ವೈಯಕ್ತಿಕ ನಿರ್ಧಾರಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಆರೋಗ್ಯವೆಂದರೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದರ ಜೊತೆಗೆ ಕಾಲ-ಕಾಲಕ್ಕೆ ತಕ್ಕಂತೆ ಪರಿಸರಕ್ಕೆ ಹೊಂದಿಕೊಳ್ಳುವ ಸಾಮಥ್ಯವು ಆಗಿದೆ. ಮಳೆಗಾಲ, ಚಲಿಗಾಲ ಮತ್ತು ಬೇಸಿಗೆ, ಹೀಗೆ ಆಯಾ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ.
ಈಗ ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ಪ್ರಖರತೆ ಮಾರ್ಚ್, ತಿಂಗಳಿನಿಂದ ಮೇ, ವರೆಗೆ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕಿದೆ. ಇಲ್ಲದಿದ್ದರೆ, ನಮಗೆ ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆಗಳು ಬರುತ್ತವೆ. ಬೇಸಿಗೆಯಲ್ಲಿ ದೇಶ ಹಾಗೂ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.
ತೀವ್ರ ತಾಪಮಾನದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ದರು ಮತ್ತು ಅನಾರೋಗ್ಯ ಪೀಡಿತರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ತಾಪಮಾನದಿಂದ ಬಳಲಿಕೆ, ನಿರ್ಜಲೀಕರಣ ಮತ್ತು ಹೀಟ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸರಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆಗಳು ಕಾಲ-ಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ನಾವೆಲ್ಲರೂ ಪಾಲಿಸಬೇಕಿದೆ.
ಮಧ್ಯಾಹ್ನ 12 ರಿಂದ 3 ಗಂಟೆಗಳವರೆಗೆ ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಎಕೆಂದರೆ, ಈ ಸಮಯದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ಬಾಯಾರಿಕೆ ಇಲ್ಲದಿದ್ದರು ಹೆಚ್ಚಿನ ನೀರನ್ನು ಕುಡಿಯಬೇಕು. ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿಗೆ ಹೋಗುವಾಗ ಛತ್ರಿ, ಟೋಫಿ ಧರಿಸಿಕೊಂಡು ಹೊರ ಹೋಗಬೇಕು. ಉಷ್ಣತೆ ಹೆಚ್ಚಾಗಿರುವ ಸಮಯದಲ್ಲಿ ಆದಷ್ಟು ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಪ್ರಯಾಣ ಮಾಡುವಾಗ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.
ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೋಹಾಲ, ಚಹಾ, ಕಾಫಿ ಮತ್ತು ಕಾರ್ಬೋನೆಟೆಡ್ ತಂಪು ಪಾನೀಯಗಳು ಸೇವಿಸುವುದನ್ನು ತಪ್ಪಿಸಬೇಕು. ಇದರ ಬದಲಿಗೆ ಈ ಋತುಮಾನದಲ್ಲಿ ಲಭ್ಯವಿರುವ ಹಣ್ಣುಗಳಾದ ಕಲ್ಲಂಗಡಿ, ಕರಬುಜ, ದ್ರಾಕ್ಷಿ, ಅನಾನಸ್, ಎಳೆನೀರು, ಸೌತೆಕಾಯಿ ಸೇರಿದಂತೆ ಇತರೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಸಾಕು ಪ್ರಾಣಿ-ಪಕ್ಷಿಗಳಿಗೂ ನೆರಳಿನಲ್ಲಿ ಇರಿಸಿ ಅವುಗಳಿಗೂ ಸಾಕಷ್ಟು ಕುಡಿಯಲು ನೀರು ಹಾಕಬೇಕು.
ಮನೆಯನ್ನು ತಂಪಾಗಿಸಲು ಪರದೆಗಳು ಅಥವಾ ಸನಶೆಡ್ಗಳನ್ನು ಬಳಸಬೇಕು. ಅತಿ ಹೆಚ್ಚಿನ ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಬಳಲಿಕೆ ಅಥವಾ ಶಾಖದ ಆಘಾತದಂತಹ ದುಷ್ಪರೀಣಾಮಗಳು ನಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕಿದೆ. ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಾರ್ವಜನಿಕರು ತಮ್ಮ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/ 102ಕ್ಕೆ ಕರೆ ಮಾಡಬಹುದಾಗಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ನದಿ, ಭಾವಿ, ಹಳ್ಳ-ಕೊಳ್ಳ ಮತ್ತು ಬೋರವೆಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ, ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ನಮ್ಮ ಅವಶ್ಯಕತೆಗೆ ತಕ್ಕಂತೆ ನೀರನ್ನು ಉಪಯೋಗಿಸಬೇಕು. ಅನ್ನ, ನೀರು ಮತ್ತು ಗಾಳಿ ಮನುಷ್ಯನ ಮೂಲಭೂತ ಅವಶ್ಯಕತೆಗಳಾಗಿರುವುದರಿಂದ ಅವುಗಳನ್ನು ನಾವು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ನೀರು ಸಿಗದ ಕಾರಣ ಕಾಡು-ಮೇಡುಗಳಲ್ಲಿ ಸಾವಿರಾರು ಪ್ರಾಣಿ- ಪಕ್ಷಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತವೆ.
ಅವುಗಳು ಬೇರೆ ಕಡೆ ಹೋಗದಂತೆ ತಡೆಯಲು ಮತ್ತು ಅವುಗಳ ನೀರಿನ ದಾಹ ತಣಿಸಲು ಕಾಡುಗಳಲ್ಲಿ ನೀರಿನ ಹೊಂಡಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರನ್ನು ಒದಗಿಸುವ ಕೆಲಸವನ್ನು ಅರಣ್ಯ ಇಲಾಖೆ ಮತ್ತು ಹಲವಾರು ಪ್ರಾಣಿದಯಾ ಸಂಘಟನೆಗಳು ನೀರನ್ನು ಒದಗಿಸುವ ಪುಣ್ಯದ ಕೆಲಸ ಮಾಡುತ್ತವೆ. ನಾವೇಕೆ ನಮ್ಮ ಮನೆಯ ಕೈತೋಟ, ಹೊಲ ಗದ್ದೆ, ಕಛೇರಿ ಆವರಣಗಳಲ್ಲಿ ನೀರಿನ ಅರೆವಟ್ಟಿಗೆಗಳನ್ನು ಕಟ್ಟಿ ಪ್ರಾಣಿ- ಪಕ್ಷಿಗಳಿಗೆ ನೀರುಣಿಸುವ ಪುಣ್ಯದ ಕೆಲಸ ಮಾಡಬಾರದು. ಈ ಬೇಸಿಗೆಯಲ್ಲಿ ನಾವೆಲ್ಲರೂ ಆರೋಗ್ಯದ ಕಡೆಗೆ ವಿಶೇಷ ಗಮನ ಕೊಡುವುದರ ಜೊತೆಗೆ ಅನಾವಶ್ಯಕವಾಗಿ ನೀರು ಪೋಲಾಗದಂತೆ ನೋಡಿಕೊಳ್ಳೊಣ.
ಲೇಖನ :- ಡಾ. ಸುರೇಶ ಜಿ.
ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್