
ಬೆಂಗಳೂರು, 05 ಮಾರ್ಚ್ (ಹಿ.ಸ.):
ಆ್ಯಂಕರ್:
ನಿಮ್ಹಾನ್ಸ್ ಅಡಿಟೋರಿಯಂನಲ್ಲಿ ಮೊತ್ತಮೊದಲ ಕ್ಲಿನಿಕಲ್ ನ್ಯೂರೋ ಸೈಕೋಲಾಜಿ ಮತ್ತು ಕಾಗ್ನಿಟಿವ್ ನ್ಯೂರೋ ವಿಜ್ಞಾನ ಅಂತರಾಷ್ಟ್ರೀಯ ಸಮ್ಮೇಳನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ ಸಚಿವರು, ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಜಾಗೃತಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಭಾರತದಂತಹ ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದ್ದು, ಅನೇಕರು ತಮ್ಮ ಸಮಸ್ಯೆಯನ್ನು ಗುರುತಿಸದೆ ಬದುಕುತ್ತಿದ್ದಾರೆ ಎಂದು ಹೇಳಿದರು.
ನಿಮ್ಹಾನ್ಸ್ ಸಂಸ್ಥೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಸಂತಸದ ವಿಷಯ ಎಂದು ತಿಳಿಸಿದ ಅವರು, ಗೃಹ ಆರೋಗ್ಯ ಕಾರ್ಯಕ್ರಮದಡಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಪ್ರಾಥಮಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಪ್ರತಿ ಜಿಲ್ಲೆಯಲ್ಲೂ ಮಾನಸಿಕ ತಜ್ಞರ ಲಭ್ಯತೆ ಖಚಿತಪಡಿಸಲಾಗಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮುಖ್ಯಮಂತ್ರಿಗಳು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ ಸಚಿವರು, ಸಾರ್ವಜನಿಕರು ಸಂಕೋಚಪಡದೆ ತಜ್ಞರ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿ ಆರ್ ಡಿ ಇ ನಿಕಟಪೂರ್ವ ಡೈರೆಕ್ಟರ್ ಜನರಲ್ ಡಾ. ಸುಬ್ರತ ರಕ್ಷಿತ್, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹಿರಿಯ ವೈದ್ಯರು ಹಾಗೂ ವಿವಿಧ ದೇಶಗಳ ಮಾನಸಿಕ ತಜ್ಞರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa