
ಗದಗ, 05 ಮಾರ್ಚ್ (ಹಿ.ಸ.)
ಆ್ಯಂಕರ್: ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆ ಶಿರಹಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ) ತಾಲೂಕು ಅಧಿಕಾರಿ ಮರಿಗೌಡ ಸುರಕೋಡ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರು ತಂಡಗಳನ್ನು ರಚಿಸಲಾಗಿದ್ದು, ಗದಗ ಮತ್ತು ಧಾರವಾಡ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಸಮಕಾಲೀನ ತಪಾಸಣೆ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಲವು ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿ ದಾಖಲೆಗಳ ಸವಿವರ ಪರಿಶೀಲನೆ ನಡೆಸಿದರು.
ಗದಗ ನಗರದ ಕಳಸಾಪೂರ ರಸ್ತೆಯ ಹೆರ್ಕಲ್ ಲೇಔಟ್ನಲ್ಲಿ ಇರುವ ಮರಿಗೌಡ ಸುರಕೋಡ ಅವರ ನಿವಾಸ, ಶಿರಹಟ್ಟಿ ಪಟ್ಟಣದಲ್ಲಿರುವ ಬಿಸಿಎಂ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅಲ್ಲದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಂಕನಾಳ ಗ್ರಾಮದಲ್ಲಿರುವ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ದಾಳಿಯ ವೇಳೆ ಅಪಾರ ಪ್ರಮಾಣದ ಅಕ್ರಮ ಹಾಗೂ ಬೇನಾಮಿ ಆಸ್ತಿ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಅಧಿಕಾರಿಯ ಅಳಿಯ ಸೇರಿದಂತೆ ಹಲವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಳಿಯನ ಹೆಸರಲ್ಲಿ ಸುಮಾರು 8 ರಿಂದ 10 ಬೇನಾಮಿ ಆಸ್ತಿಗಳು ಇರುವ ಸಾಧ್ಯತೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದಲ್ಲದೆ ಕಚೇರಿ ಸಿಬ್ಬಂದಿಯೊಬ್ಬರ ಪತ್ನಿಯ ಹೆಸರಲ್ಲಿ ಸುಮಾರು ಆರು ಎಕರೆ ಜಮೀನು ಖರೀದಿಸಿರುವುದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಈ ಎಲ್ಲಾ ಆಸ್ತಿಗಳ ಮೂಲ ಹಾಗೂ ಹಣದ ವ್ಯವಹಾರಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಒಟ್ಟಾರೆ ಭ್ರಷ್ಟಾಚಾರ ಆರೋಪದ ಹಿನ್ನೆಲೆ ಅಧಿಕಾರಿಯ ಜನ್ಮ ಜಾಲಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು ಇನ್ನಷ್ಟು ಅಕ್ರಮ ಆಸ್ತಿ ವಿವರಗಳು ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP