
ನವದೆಹಲಿ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವದಂತಿಗಳಿಗೆ ಕಿವಿಗೊಡದೆ ಹೆಚ್ಚಿನ ಖರೀದಿಯನ್ನು ತಪ್ಪಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಹಿತಿ ಪ್ರಕಾರ, ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ಮತ್ತು ಇಂಧನ ದಾಸ್ತಾನು ಲಭ್ಯವಿದೆ. ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶೀಯ ಬೇಡಿಕೆಯನ್ನು ಪೂರೈಸಲು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಇಂಧನ ಲಭ್ಯತೆ ಸ್ಥಿರವಾಗಿರಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಡೀಸೆಲ್ ಮತ್ತು ಎಟಿಎಫ್ ಮೇಲಿನ ರಫ್ತು ಸುಂಕವನ್ನು ವಿಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅನಿಲ ಪೂರೈಕೆಯಲ್ಲಿಯೂ ಯಾವುದೇ ವ್ಯತ್ಯಯ ಇಲ್ಲ. ಪೈಪ್‌ಲೈನ್ ಅನಿಲ ಮತ್ತು ಸಿಎನ್‌ಜಿ ಪೂರೈಕೆ 100% ಮುಂದುವರಿದಿದ್ದು, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ ಸರಾಸರಿ 80% ಅನಿಲ ಲಭ್ಯವಾಗುತ್ತಿದೆ. ರಸಗೊಬ್ಬರ ಘಟಕಗಳಿಗೆ 70–75% ಪೂರೈಕೆ ನಡೆಯುತ್ತಿದೆ. ಹೆಚ್ಚುವರಿ ಎಲ್‌ಎನ್‌ಜಿ ಮತ್ತು ಆರ್‌ಎಲ್‌ಎನ್‌ಜಿ ವ್ಯವಸ್ಥೆಯೂ ಮಾಡಲಾಗಿದೆ.
ಎಲ್‌ಪಿಜಿ ವಿತರಣೆಯು ಸಹ ಸಾಮಾನ್ಯವಾಗಿದ್ದು, ದಿನಕ್ಕೆ 55 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಆನ್‌ಲೈನ್ ಬುಕ್ಕಿಂಗ್ ಪ್ರಮಾಣ 94% ತಲುಪಿದ್ದು, ಡೆಲಿವರಿ ದೃಢೀಕರಣ ವ್ಯವಸ್ಥೆಗೂ ಹೆಚ್ಚಳ ಕಂಡುಬಂದಿದೆ. ವಾಣಿಜ್ಯ ಎಲ್‌ಪಿಜಿ ಪೂರೈಕೆ ಕ್ರಮೇಣ ಸಾಮಾನ್ಯ ಮಟ್ಟಕ್ಕೆ ಬರುತ್ತಿದೆ.
ಕಪ್ಪು ಮಾರುಕಟ್ಟೆ ಹಾಗೂ ಸಂಗ್ರಹಣೆಯನ್ನು ತಡೆಯಲು ದೇಶಾದ್ಯಂತ ಸಾವಿರಾರು ದಾಳಿಗಳನ್ನು ನಡೆಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ನೂರಾರು ಪೆಟ್ರೋಲ್ ಬಂಕ್‌ಗಳು ಮತ್ತು ಗ್ಯಾಸ್ ಏಜೆನ್ಸಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಗೆ ನೋಟಿಸ್ ನೀಡಿವೆ.
ಸಮುದ್ರ ಸಾರಿಗೆಯೂ ಸಾಮಾನ್ಯವಾಗಿದ್ದು, ಭಾರತೀಯ ಹಡಗುಗಳು ಸುರಕ್ಷಿತವಾಗಿ ಸಂಚರಿಸುತ್ತಿವೆ. ಎಲ್‌ಪಿಜಿ ಸಾಗಣೆ ಹಡಗುಗಳು ದೇಶಕ್ಕೆ ಆಗಮಿಸುತ್ತಿದ್ದು, ಬಂದರುಗಳಲ್ಲಿ ಯಾವುದೇ ದಟ್ಟಣೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ವಿದೇಶಾಂಗ ಸಚಿವಾಲಯ 24 ಗಂಟೆಗಳ ಸಹಾಯವಾಣಿ ಮೂಲಕ ನೆರವು ನೀಡುತ್ತಿದೆ. ಲಕ್ಷಾಂತರ ಭಾರತೀಯರು ಈಗಾಗಲೇ ದೇಶಕ್ಕೆ ಮರಳಿದ್ದು, ಉಳಿದವರನ್ನು ಪರ್ಯಾಯ ಮಾರ್ಗಗಳ ಮೂಲಕ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ.
ಒಟ್ಟಾರೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆ ಸ್ಥಿರವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa