
ಕೋಲ್ಕತ್ತಾ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜಸ್ಥಾನ ಸರ್ಕಾರದ ಶಿಕ್ಷಣ ಹಾಗೂ ಪಂಚಾಯತ್ ರಾಜ್ ಸಚಿವ ಮದನ್ ದಿಲಾವರ್ ಅವರು ವಂದೇ ಮಾತರಂ ಕೇವಲ ಒಂದು ಹಾಡಲ್ಲ, ಅದು ರಾಷ್ಟ್ರೀಯತೆಯ ಜೀವಂತ ಮಂತ್ರವಾಗಿದ್ದು, ಎಂದಿಗೂ ಅಪ್ರಸ್ತುತವಾಗುವುದಿಲ್ಲ” ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಭಾರತೀಯ ರಾಷ್ಟ್ರೀಯ ಗ್ರಂಥಾಲಯ ಸಭಾಂಗಣದಲ್ಲಿ ನಡೆದ “ವಂದೇ ಮಾತರಂ 150 ವರ್ಷಗಳ ಪೂರ್ಣಾಹುತಿ ವೈಭವಯುತ ಸ್ಮರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಗೀತೆ ಜನರಲ್ಲಿ ದೇಶಭಕ್ತಿ ಮತ್ತು ಜಾಗೃತಿಯನ್ನು ಮೂಡಿಸಿತು, ಇಂದಿಗೂ ಅದು ರಾಷ್ಟ್ರೀಯ ಏಕತೆಗೆ ಪ್ರೇರಣೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು, ಮಾರ್ಚ್ 29, 1857 ರಂದು ಮಂಗಲ ಪಾಂಡೆ ಮೊದಲ ಸ್ವಾತಂತ್ರ್ಯ ಸಮರಕ್ಕೆ ಕಹಳೆ ಮೊಳಗಿಸಿದ ದಿನವನ್ನು ಸ್ಮರಿಸಿದರು. ಬಂಗಾಳದ ನೆಲವನ್ನು ಸುಭಾಸ್ ಚಂದ್ರ ಬೋಸ್, ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಸ್ವಾಮಿ ವಿವೇಕಾನಂದ ಅವರಂತಹ ಮಹನೀಯರ ಜನ್ಮಭೂಮಿಯೆಂದು ಕೊಂಡಾಡಿದರು.
ಕಾರ್ಯಕ್ರಮದ ವಿಶೇಷ ಅತಿಥಿ ಝಬರ್ ಸಿಂಗ್ ಖರ್ರಾ ಅವರು, ಬಂಗಾಳದ ಕ್ರಾಂತಿಕಾರಿ ಪರಂಪರೆಯನ್ನು ಉಲ್ಲೇಖಿಸಿ, ರಾಶ್ ಬಿಹಾರಿ ಬೋಸ್ ಮತ್ತು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ರೂಪುಗೊಂಡ ಭಾರತೀಯ ರಾಷ್ಟ್ರೀಯ ಸೇನೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿತು ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೇಮ್ ಶಂಕರ್ ತ್ರಿಪಾಠಿ ಅವರು ವಂದೇ ಮಾತರಂನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಈ ಗೀತೆ ಮಾತೃಭೂಮಿಯ ಮೇಲಿನ ಭಕ್ತಿ ಮತ್ತು ಗೌರವದ ಸಂಕೇತವಾಗಿದ್ದು, ಭಾರತೀಯ ಆತ್ಮದ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇಳೆ ವಂದೇ ಮಾತರಂ 150 ವರ್ಷಗಳ ನೆನಪಿಗಾಗಿ ವಿಶೇಷ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಸಿದ್ಧ ಗಾಯಕ ಮಾರುತಿ ಮೋಹ್ತಾ ಮತ್ತು ತಂಡದ ಸಂಗೀತ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಈ ಭವ್ಯ ಸಮಾರಂಭವು ದೇಶಭಕ್ತಿ ಗೀತೆಗಳೊಂದಿಗೆ ಅಂತ್ಯಗೊಂಡಿದ್ದು, ರಾಜಸ್ಥಾನಿ ಸಂಸ್ಕೃತಿ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ಪ್ರಭಾವಿಯಾಗಿ ಹರಡಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa