
ಬೆಂಗಳೂರು, 27 ಮಾರ್ಚ್ (ಹಿ.ಸ.):
ಆ್ಯಂಕರ್:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ದಿನೇ ದಿನೇ ದುಸ್ತರವಾಗುತ್ತಿದ್ದರೂ, ಅದರ ಬಗ್ಗೆ ಗಮನ ಹರಿಸದೇ ಕೇಂದ್ರ ಸರ್ಕಾರ ಅಧಿಕಾರದ ಅಹಂಕಾರದಲ್ಲಿ ಮುಳುಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 11 ವರ್ಷಗಳ ಆಡಳಿತದಲ್ಲಿ ಕೇಂದ್ರ ಸರ್ಕಾರ ದಿನಕ್ಕೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಆ ಹಣದ ಬಳಕೆ ಕುರಿತು ಸ್ಪಷ್ಟತೆ ಇಲ್ಲ ಎಂದರು.
ರಾಜ್ಯದ ಜನರಿಗೆ ಅಡುಗೆ ಅನಿಲದ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೆಟ್ರೋಲ್ ಪಂಪ್‌ಗಳ ಮೇಲೆ ತಮ್ಮ ಭಾವಚಿತ್ರಗಳನ್ನು ಅಳವಡಿಸಿಕೊಂಡು ಪ್ರಚಾರಕ್ಕೆ ಸೀಮಿತವಾಗಿರುವ ಕೇಂದ್ರ ಸರ್ಕಾರ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲ್ ಬೆಲೆ ₹71 ಹಾಗೂ ಡೀಸೆಲ್ ₹56 ಇತ್ತು. ಆದರೆ ಈಗ ಎರಡೂ ಶತಕದ ಗಡಿ ದಾಟಿರುವುದು ಏಕೆ ಎಂಬುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa