ಎಸ್ ಎಸ್ ಎಸ್ ಎಲ್ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ವಿದ್ಯಾರ್ಥಿನಿ
ಗದಗ, 23 ಮಾರ್ಚ್ (ಹಿ.ಸ.) ಆ್ಯಂಕರ್: ಕಡು ಬಡತನದ ಕಾರಣದಿಂದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವೊಲಿಸಿ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಿದ ಮಾನವೀಯ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ
ಫೋಟೋ


ಫೋಟೋ


ಗದಗ, 23 ಮಾರ್ಚ್ (ಹಿ.ಸ.)

ಆ್ಯಂಕರ್: ಕಡು ಬಡತನದ ಕಾರಣದಿಂದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವೊಲಿಸಿ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಿದ ಮಾನವೀಯ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.

ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ ಬರದೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿನ ಕಡು ಬಡತನದ ಹಿನ್ನೆಲೆ, ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆಯನ್ನು ಬಿಟ್ಟು ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದಳು.

ಈ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಕ್ಷಣವೇ ಕ್ರಮ ಕೈಗೊಂಡು, ವಿದ್ಯಾರ್ಥಿನಿ ಕೆಲಸಕ್ಕೆ ಹೋಗಿದ್ದ ಸ್ಥಳಕ್ಕೆ ತೆರಳಿ ಆಕೆಯನ್ನು ಮನವೊಲಿಸಿದರು. ಈ ವೇಳೆ ಮಾತನಾಡಿದರು, ಅವರ ಮನೆಯಲ್ಲಿ ಸಾಕಷ್ಟು ಬಡತನ ಇದೆ, ಹೀಗಾಗಿ ಕೂಲಿ ಕೆಲಸಕ್ಕೆ ಹೋಗಿದ್ದು, ಅವಳನ್ನು ಮನವೊಲಿಸಿ ಪರೀಕ್ಷೆ ಬರೆಸಲಾಗಿದ್ದು, ಮುಂದಿನ ಪರೀಕ್ಷೆ ಬರೆಯಲು ಸಹಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶಿಕ್ಷಣದ ಮಹತ್ವವನ್ನು ವಿವರಿಸಿ, ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದರು. ಬಳಿಕ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆಯನ್ನು ಬರೆಯುವಂತೆ ಮಾಡಿದರು.

ಅಧಿಕಾರಿಗಳ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಡತನದ ನಡುವೆ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಇಂತಹ ಕ್ರಮಗಳು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಒಟ್ಟಾರೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಯೋಚಿತ ಹಸ್ತಕ್ಷೇಪದಿಂದ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಬೆಳಕು ದೊರೆತಂತಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande