
ಬೆಂಗಳೂರು, 23 ಮಾರ್ಚ್ (ಹಿ.ಸ.):
ಆ್ಯಂಕರ್:
ಕೆರೆಗಳ ಪುನರುಜ್ಜೀವನದ ಜೊತೆಯಲ್ಲೇ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ದವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ವಿಶ್ವ ಜಲ ದಿನದ ಅಂಗವಾಗಿ ನೀರು ಹರಿದಲ್ಲಿ – ಸಮಾನತೆ ಅರಳುತ್ತದೆ ಎಂಬ ವಿಷಯದಡಿ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕರ್ನಾಟಕ ರಾಜ್ಯ ಘಟಕ, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಡಾನ್ ಬಾಸ್ಕೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರವು ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಜಲ ಸುಸ್ಥಿರತೆಯಲ್ಲಿ ವಿನೂತನ ಹೆಜ್ಜೆ ಇಡುತ್ತಿದೆ. ಈಗಾಗಲೇ ಕೆಸಿ ವ್ಯಾಲಿ ಯೋಜನೆ ಅಡಿಯಲ್ಲಿ 𝟭𝟰𝟯 ಕೆರೆಗಳು ಹಾಗೂ ಹೆಚ್ ಎನ್ ವ್ಯಾಲಿ ಅಡಿಯಲ್ಲಿ 𝟲𝟱 ಕೆರೆಗಳಿಗೆ ಮರುಜೀವ ನೀಡಲಾಗಿದ್ದು, ಬಯಲು ಸೀಮೆಯ ಒಟ್ಟು 𝟳𝟬𝟬 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ. ಈ ಯಶಸ್ಸಿನ ಪ್ರೇರಣೆಯಿಂದ, ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಿಸಲು ₹𝟭,𝟬𝟴𝟭 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ವೃಷಭಾವತಿ ವ್ಯಾಲಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ, ಎಂದು ತಿಳಿಸಿದರು.
ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ 𝟰𝟳𝟮 ಏತ ನೀರಾವರಿ ಯೋಜನೆಗಳ ಮೂಲಕ 𝟭,𝟯𝟭𝟴 ಕೆರೆಗಳನ್ನು ತುಂಬಿಸಲಾಗುತ್ತಿದೆ. ಜೊತೆಗೆ, 𝟴,𝟬𝟬𝟬 ಕ್ಕೂ ಹೆಚ್ಚು ಚೆಕ್ ಡ್ಯಾಂಗಳು, ಬ್ರಿಡ್ಜ್-ಕಂ-ಬ್ಯಾರೇಜ್‌ಗಳು ಮತ್ತು ವೆಂಟೆಡ್ ಡ್ಯಾಂಗಳ ನಿರ್ಮಾಣದ ಮೂಲಕ ರಾಜ್ಯವು ಸುಸ್ಥಿರ ಜಲ ಸಂಗ್ರಹಣಾ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ಯೋಜನೆಗಳಿಂದಾಗಿ ನಮ್ಮ ರಾಜ್ಯದ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ಹೇಳಿದರು.
ಡೇಟಾ ಅನಾಲಿಟಿಕ್ಸ್, ರಿಯಲ್-ಟೈಮ್ ಮಾನಿಟರಿಂಗ್ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ರಾಜ್ಯವು ಅಂತರ್ಜಲ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿದೆ. ಇದರಿಂದ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಇದಲ್ಲದೆ, ಕೋಲಾರದ ಎಸ್. ಅಗ್ರಹಾರದಲ್ಲಿ 𝟭𝟬𝟬 𝗠𝗪 ಸಾಮರ್ಥ್ಯದ ತೇಲುವ ಸೌರ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, ನವೀಕರಿಸಬಹುದಾದ ವಿದ್ಯುತ್ ಶಕ್ತಿಯನ್ನು ಇಲ್ಲಿ ಉತ್ಪಾದಿಸಲಿದ್ದೇವೆ ಎಂದು ತಿಳಿಸಿದರು.
ನಮ್ಮ ದೇಶ ಹಾಗೂ ರಾಜ್ಯದ ಅಭಿವೃದ್ದಿಯಲ್ಲಿ ಇಂಜಿನೀಯರ್‌ಗಳ ಪಾತ್ರ ಹಿರಿದಾಗಿದೆ. ಅವರ ತಾಂತ್ರಿಕ ಪರಿಣಿತಿಯಿಂದ ರಾಜ್ಯದಲ್ಲಿ ನೀರಿನ ಸದ್ಬಳಕೆ ಸಾಧ್ಯವಾಗುತ್ತಿದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa