
ಗದಗ, 23 ಮಾರ್ಚ್ (ಹಿ.ಸ.)
ಆ್ಯಂಕರ್:- ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್–ಅಮೇರಿಕ ನಡುವೆ ಉದ್ಭವಿಸಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಇದೀಗ ಗದಗ ಜಿಲ್ಲೆಯಲ್ಲಿಯೂ ಗೋಚರಿಸತೊಡಗಿದ್ದು, ನರಗುಂದ ಪಟ್ಟಣದಲ್ಲಿ ಪೆಟ್ರೋಲ್ ಅಭಾವ ತೀವ್ರವಾಗಿ ಕಾಣಿಸಿಕೊಂಡಿದೆ.
ಪೆಟ್ರೋಲ್ ಸಿಗದೆ ವಾಹನ ಸವಾರರು ಪರದಾಡುತ್ತಿರುವ ಘಟನೆಗಳು ವರದಿಯಾಗಿವೆ.
ನರಗುಂದ ಪಟ್ಟಣದ ಶಿವಾಜಿ ಸರ್ಕಲ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದ್ದು, “ನೋ ಸ್ಟಾಕ್” ಎಂಬ ಫಲಕವನ್ನು ಅಳವಡಿಸಲಾಗಿದೆ. ನಿನ್ನೆ ರಾತ್ರಿ ಪೆಟ್ರೋಲ್ ಮುಗಿದು ಹೋಗಿದ್ದು, ಬಂಕ್ಗೆ ಆಗಮಿಸುತ್ತಿರುವ ಗ್ರಾಹಕರಿಗೆ ಸಿಬ್ಬಂದಿ “ಪೆಟ್ರೋಲ್ ಇಲ್ಲ” ಎಂದು ಹೇಳಿ ವಾಪಸ್ ಕಳುಹಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಇದರೊಂದಿಗೆ ಪಟ್ಟಣದ ಇನ್ನೂ ಎರಡು ಪೆಟ್ರೋಲ್ ಬಂಕ್ಗಳಲ್ಲಿಯೂ ಪೆಟ್ರೋಲ್ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ವಾಹನ ಸವಾರರು ಪರ್ಯಾಯವಾಗಿ ಬೇರೆ ಬಂಕ್ಗಳನ್ನು ಹುಡುಕುತ್ತಾ ಅಲೆದಾಡುತ್ತಿದ್ದಾರೆ. ಕೆಲವರು ಅಗತ್ಯ ಕೆಲಸಗಳಿಗೆ ಹೋಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹುಬ್ಬಳ್ಳಿ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ನಲ್ಲಿ ಮಾತ್ರ ಸೀಮಿತ ಪ್ರಮಾಣದಲ್ಲಿ ಪೆಟ್ರೋಲ್ ಲಭ್ಯವಿದ್ದು, ಅಲ್ಲಿ ಬೈಕ್ ಸವಾರರು ದೀರ್ಘ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ಬೆಳಗ್ಗಿನಿಂದಲೇ ವಾಹನಗಳ ಸಾಲು ಹೆಚ್ಚಾಗಿದ್ದು, ಕೆಲವರಿಗೆ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪೆಟ್ರೋಲ್ ಕೊರತೆಯಿಂದ ಬೈಕ್ ಹಾಗೂ ಕಾರು ಸವಾರರಿಗೆ ಭಾರೀ ತೊಂದರೆ ಉಂಟಾಗಿದ್ದು, ದಿನನಿತ್ಯದ ಕೆಲಸಗಳು ಅಸ್ತವ್ಯಸ್ತವಾಗಿವೆ. ವಿಶೇಷವಾಗಿ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದೆಂಬ ಆತಂಕ ಜನರಲ್ಲಿ ಮೂಡಿದೆ.
ಸ್ಥಳೀಯರು ತಕ್ಷಣವೇ ಇಂಧನ ಸರಬರಾಜು ಸುಧಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP