
ನವದೆಹಲಿ, 23 ಮಾರ್ಚ್ (ಹಿ.ಸ.):
ಆ್ಯಂಕರ್:ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಸೋಮವಾರ ಪಶ್ಚಿಮ ಏಷ್ಯಾ ಭಾಗಕ್ಕೆ ಒಟ್ಟು 30 ನಿಗದಿತ ಮತ್ತು ಅನಿಗದಿತ ವಿಮಾನಗಳನ್ನು ಸಂಚರಿಸಲಿವೆ ಎಂದು ಪ್ರಕಟಿಸಿವೆ.
ಸಂಸ್ಥೆಗಳ ಪ್ರಕಟಣೆಯ ಪ್ರಕಾರ, ಮುಖ್ಯವಾಗಿ ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಿಗೆ ಸಂಪರ್ಕ ಹೊಂದಿರುವ ಈ ವಿಮಾನಗಳು ಪ್ರಯಾಣಿಕರ ಸೌಲಭ್ಯಕ್ಕಾಗಿ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಮರುಬುಕಿಂಗ್ ಹಾಗೂ ಪೂರ್ಣ ಹಣ ಮರಳಿಕೆ ಆಯ್ಕೆಯನ್ನೂ ಒದಗಿಸಲಾಗಿದೆ.
ಜಿದ್ದಾ ಮಾರ್ಗದಲ್ಲಿ ನಿಯಮಿತ ಸೇವೆಗಳು ಮುಂದುವರಿಯಲಿದ್ದು, ಭಾರತ–ಜಿದ್ದಾ ನಡುವೆ ಒಟ್ಟು 10 ವಿಮಾನಗಳು ಸಂಚರಿಸಲಿವೆ. ಎರ್ ಇಂಡಿಯಾ ಸಂಸ್ಥೆ ದೆಹಲಿ ಮತ್ತು ಮುಂಬಯಿ ನಗರಗಳಿಂದ ತಲಾ ಒಂದು ರಿಟರ್ನ್ ವಿಮಾನಗಳನ್ನು ನಡೆಸಲಿದೆ. ಇತ್ತ ಏರ್ ಇಂಡಿಯಾ ಸಂಸ್ಥೆ ಬೆಂಗಳೂರು, ಕೋಝಿಕ್ಕೋಡ್ ಮತ್ತು ಮಂಗಳೂರು ನಗರಗಳಿಂದ ತಲಾ ಒಂದು ವಿಮಾನವನ್ನು ನಡೆಸಲಿದೆ.
ಇದರ ಜೊತೆಗೆ, ಮಸ್ಕಟ್‌ನಿಂದ ನಾಲ್ಕು ನಿಗದಿತ ವಿಮಾನಗಳು (ದೆಹಲಿ, ಮುಂಬೈ ಸೇರಿ) ಸಂಚರಿಸಲಿದ್ದು, ಬೆಂಗಳೂರು–ಕೋಝಿಕ್ಕೋಡ್ ಮಾರ್ಗಗಳಿಂದ ರಿಯಾದ್‌ಗೆ ನಾಲ್ಕು ವಿಮಾನಗಳು ಓಡಾಡಲಿವೆ.
ನಿಗದಿತ ಸೇವೆಗಳ ಹೊರತಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಸೌದಿ ಅರೇಬಿಯಾ ದೇಶಗಳಿಂದ ಒಟ್ಟು 12 ಹೆಚ್ಚುವರಿ ವಿಮಾನಗಳನ್ನು ಸಂಚರಿಸಲು ಯೋಜಿಸಲಾಗಿದೆ. ಈ ವಿಮಾನಗಳು ಸ್ಲಾಟ್ ಲಭ್ಯತೆ ಮತ್ತು ಸ್ಥಳೀಯ ಪರಿಸ್ಥಿತಿಗಳ ಆಧಾರದಲ್ಲಿ ಕಾರ್ಯನಿರ್ವಹಿಸಲಿವೆ. ಅಗತ್ಯ ಅನುಮತಿಗಳನ್ನು ಭಾರತೀಯ ಹಾಗೂ ಸಂಬಂಧಿತ ಸ್ಥಳೀಯ ನಿಯಂತ್ರಣ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಉತ್ತರ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಇತರೆ ಪ್ರದೇಶಗಳ ಎಲ್ಲಾ ವಿಮಾನಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುತ್ತಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇದೇ ವೇಳೆ, ಕೆಲ ಮಾರ್ಗಗಳಲ್ಲಿ ತಾತ್ಕಾಲಿಕ ವ್ಯತ್ಯಯ ಕಂಡುಬಂದ ಹಿನ್ನೆಲೆ, ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ದಿನಾಂಕ ಬದಲಾವಣೆ ಅಥವಾ ಸಂಪೂರ್ಣ ಹಣ ಮರುಪಾವತಿ ಪಡೆಯುವ ಅವಕಾಶ ನೀಡಲಾಗಿದೆ. ಪ್ರಯಾಣಿಕರು ಮರುಬುಕಿಂಗ್ ಅಥವಾ ರದ್ದುಪಡಿಸಲು ಏರ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಮನವಿ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa