
ಗದಗ, 23 ಮಾರ್ಚ್ (ಹಿ.ಸ.)
ಆ್ಯಂಕರ್: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆಕಳು ಹಾಗೂ ಕರು ಜೀವಂತವಾಗಿ ಸುಟ್ಟು ಸಾವು ಕಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯರ್ಥದ ಸಮೀಪ ನಡೆದಿದೆ.
ಮಲ್ಲಪ್ಪ ಉಮಚುಗಿ ಎಂಬ ರೈತನಿಗೆ ಸೇರಿದ ದನದ ಶೆಡ್ಡಿಯಲ್ಲಿ ಈ ಅವಘಡ ಸಂಭವಿಸಿದೆ. ದನದ ಶೆಡ್ಡಿಯಲ್ಲಿ ಇದ್ದ ಆಕಳು ಮತ್ತು ಕರು ಬೆಂಕಿಯ ತೀವ್ರತೆಯಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿದ್ದು, ಅವುಗಳಿಗೆ ತೀವ್ರ ಚಿಕಿತ್ಸೆ ಅಗತ್ಯವಿದೆ.
ಬೆಂಕಿ ಕಾಣಿಸಿಕೊಂಡ ಕ್ಷಣದಲ್ಲೇ ಸ್ಥಳೀಯರು ಆತಂಕಗೊಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ ಅಷ್ಟರಲ್ಲೇ ದನದ ಶೆಡ್ಡಿಯಲ್ಲಿದ್ದ ಶೇಂಗಾ ಹೊಟ್ಟು, ಮೇವು ಸೇರಿದಂತೆ ಸಂಪೂರ್ಣ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಈ ಅವಘಡದಿಂದ ರೈತ ಮಲ್ಲಪ್ಪ ಉಮಚುಗಿ ಅವರಿಗೆ ಭಾರೀ ನಷ್ಟ ಉಂಟಾಗಿದೆ. ದನಗಳು ಮಾತ್ರವಲ್ಲದೆ, ಪಶುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವು ಸಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಘಟನೆಯ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ನಾವುದೇ ಕಾರಣಗಳಿಂದ ಬೆಂಕಿ ತಗುಲಿದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಆಕಸ್ಮಿಕ ಬೆಂಕಿಯಿಂದ ಜೀವಕ್ಕೆ ಹಾನಿಯಾಗಿರುವುದು ಸ್ಥಳೀಯರಲ್ಲಿ ದುಃಖ ಮತ್ತು ಆತಂಕ ಮೂಡಿಸಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP