
ಹುಬ್ಬಳ್ಳಿ, 22 ಮಾರ್ಚ್ (ಹಿ.ಸ.):
ಆ್ಯಂಕರ್:
ಮಹಾವೀರ ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ದಿಗಂಬರ ಜೈನ ಮಹಿಳಾ ಸಮಾಜದ ವತಿಯಿಂದ ಅಹಿಂಸೆಯ ಸಂದೇಶ ಸಾರುವ ‘ಅಹಿಂಸಾ ನಡಿಗೆ’ ಕಾರ್ಯಕ್ರಮ ಭಾನುವಾರ ನಡೆಯಿತು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮಕ್ಕೆ ಲಾವಣ್ಯ ಬಳ್ಳಾಲ್, ಡಾ. ವಿ.ಎಸ್. ಪ್ರಸಾದ್ ಹಾಗೂ ಮಹೇಂದ್ರ ಸಿಂಘಿ ಅವರು ಅಹಿಂಸಾ ಧ್ವಜ ಬೀಸಿ ಚಾಲನೆ ನೀಡಿದರು. ಈ ವೇಳೆ ಜೈನ ಧರ್ಮದ ತತ್ತ್ವಗಳನ್ನು ಪ್ರತಿಪಾದಿಸಿದ ಭಗವಾನ್ ಮಹಾವೀರರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಅಹಿಂಸೆಯ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಪ್ರಾಣಿ–ಪಕ್ಷಿಗಳ ಮೇಲಿನ ದಯೆ ಮತ್ತು ಸಹಾನುಭೂತಿ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ನೀರು ಇಟ್ಟು ಜೀವಿಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಡಾ. ವಿ.ಎಸ್. ಪ್ರಸಾದ್ ಮಾತನಾಡಿ, ಭಾರತ ದೇಶದಲ್ಲಿ ವಿವಿಧ ಜಾತಿ–ಮತಗಳಿದ್ದರೂ ಅಹಿಂಸೆಯೇ ಎಲ್ಲರಿಗೂ ಸಾಮಾನ್ಯ ಮೌಲ್ಯವಾಗಿದೆ ಎಂದರು. ದಿಗಂಬರ ಜೈನ ಮಹಿಳಾ ಸಮಾಜ ನೀಡುತ್ತಿರುವ ಈ ಸಂದೇಶ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು. ಸಮಾಜದ ನಾಯಕಿ ತ್ರಿಶಾಲ ಮಾಲಗತ್ತಿ ಅವರ ನಾಯಕತ್ವವನ್ನು ಕೊಂಡಾಡಿದರು.
ಮತ್ತೊರ್ವ ಅತಿಥಿ ಮಹೇಂದ್ರ ಸಿಂಘಿ ಮಾತನಾಡಿ, ಭಗವಾನ್ ಮಹಾವೀರರ ಪ್ರೀತಿ ಮತ್ತು ಅಹಿಂಸೆಯ ಸಂದೇಶವು ವಿಶ್ವಕ್ಕೆ ಮಾರ್ಗದರ್ಶಕವಾಗಿದೆ ಎಂದರು. ಪ್ರತಿ ವರ್ಷವೂ ಈ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾಲ ಮಾಲಗತ್ತಿ ಎಲ್ಲರನ್ನು ಸ್ವಾಗತಿಸಿದರು. ಬಳಿಕ ಅತಿಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶುಭಾಷ್ ಸಿಂಗ್ ಜಮಾದಾರ್, ಭುಜಬಲಿ ಮಾಲಗತ್ತಿ, ಪಂಕಜ್ ಎಂ., ಉದಯ್ ರೋಖಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ಅಹಿಂಸಾ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಲಾಯಿತು. ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಲಾಯಿತು. ಮಹಾವೀರ ಗಲ್ಲಿಯಲ್ಲಿ ಅಹಿಂಸಾ ವಾಕ್ ಸಮಾಪ್ತಿಗೊಂಡು, ಭಾಗವಹಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa