
ದಾವಣಗೆರೆ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ರಂಜಾನ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಹಲವರು ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮದ ಬಳಿ ನಡೆದಿದೆ.
ಸುಮಾರು 800ಕ್ಕೂ ಅಧಿಕ ಮುಸ್ಲಿಂ ಬಾಂಧವರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಕೆಲ ಯುವಕರು ಹೆಜ್ಜೇನು ಗೂಡಿಗೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಏಕಾಏಕಿ ಜೇನುಹುಳುಗಳು ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.
ದಾಳಿಯ ತೀವ್ರತೆಗೆ ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದರೆ, ಮಹಿಳೆಯರು, ಮಕ್ಕಳು ಸೇರಿದಂತೆ ಹಲವರ ಮೇಲೆ ಹೆಜ್ಜೇನುಗಳು ಕಚ್ಚಿವೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ತಕ್ಷಣವೇ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಹೊಗೆ ಮಾಡಿಸಿ ಜೇನುಹುಳುಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆದಿದ್ದು, ಉಳಿದ ಗಾಯಾಳುಗಳಿಗೆ ತುರ್ತು ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ವಾರ್ಡಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾಯಕೊಂಡ ಶಾಸಕ ಬಸವಂತಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ನೆರವು ನೀಡಿದ್ದು, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa