
ನಾಗ್ಪುರ, 19 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು, “ಈಗ ಸಂಘದ ವಿರೋಧಿಗಳು ಹಾಗೂ ಕಮ್ಯುನಿಸ್ಟ್‌ಗಳೂ ಸಹ ಸಂಘದ ಉತ್ತಮ ಕಾರ್ಯಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಗುರುವಾರ ನಾಗಪುರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪರಸ್ಪರ ಪ್ರೀತಿ ಮತ್ತು ಆತ್ಮೀಯತೆಯೇ ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದರು. “ಎರಡು ವ್ಯಕ್ತಿಗಳು ಪರಸ್ಪರ ಸಂಪರ್ಕದಲ್ಲಿರುವವರೆಗೆ ಸಂಘ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದರು. ಅನೂಕೂಲ ಪರಿಸ್ಥಿತಿಗಳು ಸವಾಲುಗಳನ್ನೂ ತಂದೊಡ್ಡುತ್ತವೆ ಹಾಗೂ ಪತನದ ಆರಂಭವೂ ಆಗಬಹುದು ಎಂದು ಎಚ್ಚರಿಸಿದರು.
ಸಂಘದ ಕಾರ್ಯಪದ್ಧತಿ ಕುರಿತು ವಿವರಿಸಿದ ಅವರು, ಕಳೆದ 100 ವರ್ಷಗಳಲ್ಲಿ ಸಂಘದ ಕಾರ್ಯ ವ್ಯಾಪಕವಾಗಿ ವಿಸ್ತರಿಸಿರುವುದರಿಂದ ಸಂಘಟನಾ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಅಗತ್ಯವಾಗಿದೆ ಎಂದರು. ಈ ಹಿನ್ನೆಲೆ ‘ಪ್ರಾಂತ’ ಬದಲು ‘ವಿಭಾಗ’ ಎಂಬ ಹೊಸ ರಚನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಇನ್ನೂ, ಸಂಘದ ಕಾರ್ಯಪದ್ಧತಿ ಕಾಲಾನುಸಾರ ರೂಪಾಂತರಗೊಳ್ಳುತ್ತದೆ ಆದರೆ ಅದರ ಮೂಲ ಧ್ಯೇಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಜನರೊಂದಿಗೆ ಸ್ನೇಹ ಬೆಳೆಸಿ, ಸ್ವಂತ ಉದಾಹರಣೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರುವುದು ಸಂಘದ ಪ್ರಮುಖ ಕಾರ್ಯಪದ್ಧತಿಯಾಗಿದೆ ಎಂದರು.
ಇತಿಹಾಸವನ್ನು ಉಲ್ಲೇಖಿಸಿದ ಅವರು, ವಿಭಜನೆಯ ಸಮಯದಲ್ಲಿ ಹಿಂದುಗಳ ರಕ್ಷಣೆಯೇ ಸಂಘದ ಪ್ರಮುಖ ಕಾರ್ಯವಾಗಿತ್ತು. ಈಗ ಕಾಲಮಾನ ಬದಲಾಗಿರುವುದರಿಂದ ಕಾರ್ಯವೂ ಬದಲಾಗುತ್ತಿದೆ ಎಂದು ಹೇಳಿದರು.
ತಮ್ಮ ಹೇಳಿಕೆಗಳನ್ನು ತಪ್ಪು ಅರ್ಥೈಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿದರೂ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕೆಲವೊಮ್ಮೆ ಅದನ್ನು ನೋಡಿ ನಗೆ ಬರುತ್ತದೆ” ಎಂದರು.
‘ಜೆನ್-ಝಡ್’ ಯುವಜನತೆ ಕುರಿತು ಮಾತನಾಡಿದ ಅವರು, ದೇಶವನ್ನು ಮಹಾನ್ ಮಾಡಬೇಕೆಂಬ ಮತ್ತು ಪರಂಪರೆಗಳನ್ನು ಮುಂದುವರಿಸಬೇಕೆಂಬ ಮನೋಭಾವ ಯುವಕರಲ್ಲಿ ಕಂಡು ಬರುತ್ತಿದೆ ಎಂದು ಹೇಳಿದರು. ಪ್ರಾಮಾಣಿಕತೆ ಮತ್ತು ಸೇವಾಭಾವ ಅವರಿಗೆ ಆಕರ್ಷಕವಾಗಿದ್ದು, ಸಂಘದ ವಿಚಾರಗಳೊಂದಿಗೆ ಅವರು ಸಂಪರ್ಕ ಸಾಧಿಸುತ್ತಿದ್ದಾರೆ ಎಂದರು.
ಉನ್ನತ ಕಟ್ಟಡಗಳು ಮತ್ತು ಸೊಸೈಟಿಗಳಲ್ಲಿರುವ ಯುವಕರೊಂದಿಗೆ ಸಂಪರ್ಕವನ್ನು ವಿಸ್ತರಿಸಲು ಸಂಘವು ವಿಶೇಷ ಗಮನ ಹರಿಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಡಾ. ವಿಲಾಸ್ ಡಾಂಗರೇ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa