ರಾಜಕೀಯದಲ್ಲಿ ಪೂರ್ಣವಿರಾಮ ಇಲ್ಲ:ಪ್ರಧಾನಿ ಮೋದಿ
ನವದೆಹಲಿ, 18 ಮಾರ್ಚ್ (ಹಿ.ಸ.): ಆ್ಯಂಕರ್: ಏಪ್ರಿಲ್–ಜುಲೈ ಅವಧಿಯಲ್ಲಿ ನಿವೃತ್ತಿಯಾಗುತ್ತಿರುವ 59 ರಾಜ್ಯಸಭಾ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಜೀವನದಲ್ಲಿ “ಪೂರ್ಣವಿರಾಮ” ಎಂಬುದೇ ಇಲ್ಲ; ಸದನದ ಹೊರಗೆಯೂ ಸಾರ್ವಜನಿಕ ಸೇವೆ ನಿರಂತರವಾಗಿಯೇ ಸಾಗುತ್ತದೆ ಎಂದು ಹೇಳಿದರು. ರ
Pm


ನವದೆಹಲಿ, 18 ಮಾರ್ಚ್ (ಹಿ.ಸ.):

ಆ್ಯಂಕರ್:

ಏಪ್ರಿಲ್–ಜುಲೈ ಅವಧಿಯಲ್ಲಿ ನಿವೃತ್ತಿಯಾಗುತ್ತಿರುವ 59 ರಾಜ್ಯಸಭಾ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಜೀವನದಲ್ಲಿ “ಪೂರ್ಣವಿರಾಮ” ಎಂಬುದೇ ಇಲ್ಲ; ಸದನದ ಹೊರಗೆಯೂ ಸಾರ್ವಜನಿಕ ಸೇವೆ ನಿರಂತರವಾಗಿಯೇ ಸಾಗುತ್ತದೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸತ್ತು ಕೇವಲ ಕಾನೂನು ರಚನೆಗೆ ಸೀಮಿತವಲ್ಲ; ಇದು ಪ್ರತಿಯೊಬ್ಬ ಸದಸ್ಯನಿಗೂ ಕಲಿಕೆ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ನೀಡುವ “ಮುಕ್ತ ವಿಶ್ವವಿದ್ಯಾಲಯ” ಎಂದು ಬಣ್ಣಿಸಿದರು.

ಸದಸ್ಯರು ತಮ್ಮ ಅವಧಿಯಲ್ಲಿ ವಿವಿಧ ವಿಷಯಗಳ ಚರ್ಚೆಗೆ ಮಹತ್ವದ ಕೊಡುಗೆ ನೀಡುತ್ತಾರೆ. ಅಧಿಕಾರಾವಧಿಯಲ್ಲಿ ಸಿಹಿ–ಕಹಿ ಅನುಭವಗಳಿದ್ದರೂ, ವಿದಾಯ ಸಮಯದಲ್ಲಿ ಪಕ್ಷಭೇದ ಮೀರಿದ ಸಾಮಾನ್ಯ ಭಾವನೆಗಳು ಮೂಡುತ್ತವೆ ಎಂದು ಹೇಳಿದರು.

ಹಿರಿಯ ನಾಯಕರಿಗೆ ಪ್ರಶಂಸೆ

ತಮ್ಮ ಭಾಷಣದಲ್ಲಿ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರಂತಹ ಹಿರಿಯ ನಾಯಕರ ಕೊಡುಗೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಅವರ ಸಂಸದೀಯ ಅನುಭವದಿಂದ ಹೊಸ ಪೀಳಿಗೆ ಬಹಳಷ್ಟು ಕಲಿಯಬಹುದು ಎಂದು ಹೇಳಿದರು.

ಉಪಸಭಾಪತಿಗೆ ಶ್ಲಾಘನೆ

ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರನ್ನು ಮೃದುಭಾಷಿ ಹಾಗೂ ದಕ್ಷ ನಾಯಕ ಎಂದು ಕರೆದ ಅವರು, ಸದನದ ಸುಗಮ ಕಾರ್ಯನಿರ್ವಹಣೆಯಲ್ಲಿ ಅವರ ಪಾತ್ರ ಶ್ಲಾಘನೀಯ ಎಂದರು.

ಹಾಸ್ಯಕ್ಕೂ ಪ್ರಾಮುಖ್ಯತೆ

ಸದನದಲ್ಲಿ ಹಾಸ್ಯಭರಿತ ವಾತಾವರಣದ ಅಗತ್ಯವನ್ನೂ ಒತ್ತಿ ಹೇಳಿದ ಪ್ರಧಾನಿ, ರಾಮದಾಸ್ ಅಠಾವಳೆ ಅವರ ಹಾಸ್ಯ ಶೈಲಿಯನ್ನು ಉಲ್ಲೇಖಿಸಿದರು. 24x7 ಮಾಧ್ಯಮ ಪ್ರಸಾರದ ನಡುವೆ ಹಾಸ್ಯಕ್ಕೆ ಅವಕಾಶ ಕಡಿಮೆಯಾಗಿದ್ದರೂ, ಅವರ ಶೈಲಿ ಸದನದಲ್ಲಿ ಹಗುರ ವಾತಾವರಣವನ್ನು ಉಳಿಸುತ್ತದೆ ಎಂದರು.

ಪ್ರಜಾಪ್ರಭುತ್ವದ ಶಕ್ತಿ – ‘ಎರಡನೇ ಅಭಿಪ್ರಾಯ’

ಎರಡನೇ ಸದನದ ಪರಿಶೀಲನೆ ಪ್ರಜಾಪ್ರಭುತ್ವದ ಪ್ರಮುಖ ಬಲ ಎಂದು ಪ್ರಧಾನಿ ಹೇಳಿದರು. ಒಂದು ಸದನದ ನಿರ್ಧಾರಗಳನ್ನು ಇನ್ನೊಂದು ಸದನ ಪರಿಶೀಲಿಸುವುದರಿಂದ ನಿರ್ಧಾರ ಪ್ರಕ್ರಿಯೆ ಹೆಚ್ಚು ಸಮಗ್ರವಾಗುತ್ತದೆ ಎಂದು ವಿವರಿಸಿದರು.

ಹೊಸ ಮತ್ತು ಹಳೆಯ ಸದಸ್ಯರ ನಡುವೆ ಅನುಭವ ಹಂಚಿಕೆಯಿಂದ ಸದನದ ಕಾರ್ಯಚಟುವಟಿಕೆಯಲ್ಲಿ ನಿರಂತರತೆ ಉಳಿಯುತ್ತದೆ. ನಿವೃತ್ತ ಸದಸ್ಯರು ಭವಿಷ್ಯದಲ್ಲಿ ಮತ್ತೆ ಸದನಕ್ಕೆ ಮರಳಬಹುದು ಅಥವಾ ಸಮಾಜ ಜೀವನದಲ್ಲಿ ಹೊಸ ಕೊಡುಗೆ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಭಾಷಣದ ಕೊನೆಯಲ್ಲಿ, ಎಲ್ಲಾ ನಿವೃತ್ತ ಸದಸ್ಯರಿಗೆ ಶುಭಾಶಯ ಕೋರಿದ ಪ್ರಧಾನಿ, ಅವರ ಅನುಭವ ರಾಷ್ಟ್ರ ನಿರ್ಮಾಣದಲ್ಲಿ ಮುಂದುವರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande